ವಿರಾಜಪೇಟೆ : ಅನ್ಯ ಭಾಷೆ ಮಾತನಾಡುವ ಮಕ್ಕಳಲ್ಲಿ ಬೋಧಕರು ನೈಜ ಭಾಷೆಯ ಮನೋಭಾವನೆ ಬರುವಂತೆ ನೋಡಿಕೊಂಡು ಬೋಧಿಸಬೇಕಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಸಂಗಪ್ಪ ಅಲೂರ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಕಾವೇರಿ ಕಾಲೇಜು ಹಾಗೂ ದಲಿತ ಸಾಹಿತ್ಯ ಪರಿಷತ್ ನುಡಿ ಉತ್ಸವ ಮತ್ತು ಕೊಡಗು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗಡಿ ಪ್ರದೇಶಗಳ ಪಠ್ಯ ಕ್ರಮದಲ್ಲಿ ಕನ್ನಡ ಭಾಷಾ ನೀತಿ ಹಾಗೂ ಬಹುಭಾಷ ವಾಸ್ತವಿಕತೆಗಳ ಮರುಚಿಂತನೆ ಎನ್ನುವ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಕನ್ನಡ ಭಾಷೆ ಸಾವಿರಾರು ವರ್ಷದ ಇತಿಹಾಸ ಇರುವ ಭಾಷೆ. ಇದಕ್ಕೆ ೨೦೦೮ ರಲ್ಲಿ ಶಾಸ್ತ್ರೀಯ ಸ್ಥಾನ ಬಂದಿರುವುದು ಹೆಮ್ಮೆ, ಗೌರವ ಎಂದು ಹೇಳಿಕೊಂಡರೆ ಸಾಲದು. ಈ ಪುರಾತನ ಭಾಷೆಯಲ್ಲಿ ಸಾಹಿತ್ಯ ಪರಂಪರೆ ಸಂಸ್ಕೃತಿ ವಿಚಾರ ವಿಚಾರ ಆಳವಾಗಿದ್ದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ಆಗಬೇಕು. ನಮ್ಮ ಎಲ್ಲಾ ವಿದ್ಯಾಲಯದ ಕನ್ನಡ ಪ್ರಾಧ್ಯಪಕರು ಈ ರೀತಿಯ ಕಾರ್ಯಕ್ರಮ ಆಯೋಜಿಸಿದರೆ ನಮ್ಮ ಪರಂಪರೆ ಪದ್ದತಿಯನ್ನು ಬಿಂಬಿಸಲು ಸಹಕಾರಿಯಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದ ಸಾ ಪ ನುಡಿ ಉತ್ಸವ ಸಮಿತಿ ಅಧ್ಯಕ್ಷ ಅರ್ಜುನ್ ಮೌರ್ಯ, ಕಳೆದ ನವೆಂಬರ್ನಿಂದ ಈ ಸಾಲಿನ ನವೆಂಬರ್ವರೆಗೆ ೧೯ ಕಾರ್ಯಕ್ರಮ ನಡೆಸುವ ಉದ್ದೇಶ ಇದೆ. ೪ ಸಾರ್ವಜನಿಕ ಮತ್ತು ಉಳಿದವು ಕಾಲೇಜು ಮಟ್ಟದಾಗಿದೆ ಎಂದ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿ ವಿದ್ಯಾ ಸಂಸ್ಥೆ ಗೋಣಿಕೊಪ್ಪ ಇದರ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ ವಹಿಸಿದ್ದರು. ವೇದಿಕೆಯಲ್ಲಿ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ ವೀಣಾ ಉಪಸ್ಥಿತರಿದ್ದರು. ವಿರಾಜಪೇಟೆ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ಸುನಿಲ್ ಕುಮಾರ್ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಪವಿತ್ರ ನಿರೂಪಿಸಿದರು. ಗೋಣಿಕೊಪ್ಪ ಕಾವೇರಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಅಕ್ರಮ್ ವಂದಿಸಿದರು.



