ಪೊನ್ನಂಪೇಟೆ : ಕಾಟ್ರಕೊಲ್ಲಿಯಲ್ಲಿ ನೆಲೆಸಿರುವ ಕೊಡವ ಮುಸ್ಲಿಮರ ಮನೆತನಗಳಲ್ಲಿ ಒಂದಾಗಿರುವ ಆಲೀರ ಕುಟುಂಬಸ್ಥರ ಸಾಮಾಜಿಕ ಶ್ರೇಯೋಭಿವೃದ್ಧಿಗಾಗಿ ಕಾಟ್ರಕೊಲ್ಲಿ ಆಲೀರ ಕುಟುಂಬ ಸಂಘವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಆಲೀರ ಐನ್ ಮನೆಯಲ್ಲಿ ಇತ್ತೀಚಿಗೆ ನಡೆದ ಕುಟುಂಬಸ್ಥರ ಸಭೆಯಲ್ಲಿ ಈ ಕುರಿತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ಕುಟುಂಬದ ಹಿರಿಯರಾದ, ನಿವೃತ್ತ ಕೃಷಿ ಅಧಿಕಾರಿ ಆಲೀರ ಅಬು ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕುಟುಂಬಸ್ಥರ ಸಭೆಯಲ್ಲಿ ಕಾಟ್ರಕೊಲ್ಲಿ ಆಲೀರ ಕುಟುಂಬ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ಪೊನ್ನಂಪೇಟೆ ಪಂಚಾಯಿತಿ ಉಪಾಧ್ಯಕ್ಷರಾಗಿರುವ ಆಲೀರ ಎಂ. ರಶೀದ್ ಅವರನ್ನು ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ನೇಮಕಗೊಳಿಸಲಾಯಿತು. ಉಪಾಧ್ಯಕ್ಷರಾಗಿ ಎ.ಎ. ಹುಸೈನ್ ಮತ್ತು ಎ.ಎ. ಅಬ್ಬಾಸ್, ಕಾರ್ಯದರ್ಶಿಯಾಗಿ ಎ.ಎ. ಹಸೈನಾರ್, ಸಹ ಕಾರ್ಯದರ್ಶಿಯಾಗಿ ಎ.ಎಸ್. ಸಿದ್ದೀಕ್, ಕೋಶಾಧಿಕಾರಿಯಾಗಿ ಎ.ಎ. ಅಝೀಜ್ ಅವರನ್ನು ಸಭೆಯಲ್ಲಿ ಆಯ್ಕೆಗೊಳಿಸಲಾಯಿತು.
ಎ.ಪಿ. ಯೂಸುಫ್, ಎ.ವೈ. ಖಲೀಲ್, ಎ.ಎಸ್. ಅಬ್ದುಲ್ ನಾಸಿರ್, ಎ.ಎಸ್. ಫಾರೂಕ್, ಎ.ಎಸ್. ಸಂಶೀರ್ ಅವರನ್ನು ಮಂಡಳಿಯ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಯಿತು. ಹಿರಿಯರಾದ ಆಲೀರ ಅಬು ಹಾಜಿ ಅವರನ್ನು ಗೌರವಾಧ್ಯಕ್ಷರಾಗಿ ನೇಮಕಗೊಳಿಸಿದ ಸಭೆ, ಎ.ಎ. ಅಬ್ದುಲ್ಲಾ, ಎ.ಎ. ಅಬ್ದುಲ್ ರಜಾಕ್ ಮಿಸ್ಬಾಯಿ ಮತ್ತು ಎ.ಎ. ಮೂಸ ಅವರನ್ನು ಸಲಹಾ ಸಮಿತಿಯ ಪ್ರಮುಖರಾಗಿ ಆಯ್ಕೆಗೊಳಿಸಿತು. ಅಲ್ಲದೆ ನೂತನ ಸಂಘವನ್ನು ಸರ್ಕಾರದ ನಿಯಮಾವಳಿಯಂತೆ ನೋಂದಾಯಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಆಯ್ಕೆ ಪ್ರಕ್ರಿಯೆ ಬಳಿಕ, ಐನ್ ಮನೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಕಾಟ್ರಕೊಲ್ಲಿಯ ಒಟ್ಟು 5 ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಆಲೀರ ಅಬು ಹಾಜಿ, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸತತ ಪರಿಶ್ರಮ ವಹಿಸಿ ಸರ್ಕಾರಿ ಉದ್ಯೋಗದಲ್ಲಿ ಉನ್ನತ ಸ್ಥಾನಗಳನ್ನು ಪಡೆದಾಗ ಮಾತ್ರ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಜೊತೆಗೆ ಸಮಾಜದಲ್ಲಿ ಉತ್ತಮ ಪರಿವರ್ತನೆಗಳಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣ ಪಡೆದವರ ಜೀವನ ಉತ್ತಮವಾಗಿರುತ್ತದೆ. ಶಿಕ್ಷಣವು ಪ್ರತಿಯೊಬ್ಬರಿಗೂ ಆಸ್ತಿಯಾಗಿದ್ದು, ಅದು ಜೀವನದುದ್ದಕ್ಕೂ ಉತ್ತಮ ಲಾಭವನ್ನು ನೀಡುತ್ತದೆ. ಆದ್ದರಿಂದ ಯಶಸ್ವಿ ಜೀವನವನ್ನು ನಡೆಸಲು ಪ್ರತಿಯೊಬ್ಬರೂ ಉತ್ತಮ ಶಿಕ್ಷಣವನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಟುಂಬದ ಪ್ರಮುಖತು, ಕಾಟ್ರಕೊಲ್ಲಿಯ ಪುಂಜೆರ ಮತ್ತು ಬಲ್ಲಪಂಡ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



