ಮಡಿಕೇರಿ : ಪೊನ್ನಂಪೇಟೆ ತಾಲೂಕಿನ ದೇವರಪುರ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ಆಚರಿಸುವ ಬೇಡು ಹಬ್ಬದ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಹಲವು ಸೂಚನೆಗಳನ್ನು ನೀಡಿದೆ. ಭಕ್ತರು ಉತ್ಸವ ಸಂದರ್ಭ ಅದನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ಜಿಲ್ಲೆಯ ವಿವಿಧ ಸ್ಥಳಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಭಕ್ತಾದಿಗಳು ಬಂದು ದೇವಸ್ಥಾನದಲ್ಲಿ ಹರಕೆ ತೀರಿಸುವ ಆಚರಣೆಯಿದ್ದು, ಕೆಲವು ಭಕ್ತಾದಿಗಳು/ವೇಷಾಧಾರಿಗಳು ಮದ್ಯ ಸೇವನೆ ಮಾಡಿ ಗೋಣಿಕೊಪ್ಪಲು ಪಟ್ಟಣ ಮತ್ತು ತಿತಿಮತಿ ರಸ್ತೆಯಲ್ಲಿನ ಅಂಗಡಿ ಮಳಿಗೆಗಳಿಗೆ ತೆರಳಿ ಒತ್ತಾಯವಾಗಿ ಹಣವನ್ನು ನೀಡುವಂತೆ ಪೀಡಿಸುವುದು, ವಿವಿಧ ವೈಯಕ್ತಿಕ ಕೆಲಸ-ಕಾರ್ಯಗಳಿಗಾಗಿ ನಗರಕ್ಕೆ ಭೇಟಿ ನೀಡಿರುವ ಸಾರ್ವಜನಿಕರು/ವಾಹನಗಳನ್ನು ಅಡ್ಡಗಟ್ಟುವುದು ಹಾಗೂ ವಿಶೇಷವಾಗಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಕೆಟ್ಟ ಪದಗಳಿಂದ ಬೈಯುತ್ತಾ ತೊಂದರೆ ನೀಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡಿದೆ.
1) ವೇಷಾಧಾರಿ ಭಕ್ತಾದಿಗಳು ಸಾರ್ವಜನಿಕರನ್ನು/ ವಾಹನಗಳನ್ನು ಬಲವಂತವಾಗಿ ಅಡ್ಡಗಟ್ಟಿ ಹಣವನ್ನು ನೀಡುವಂತೆ ಒತ್ತಾಯಿಸುವುದನ್ನು ನಿಷೇಧಿಸಲಾಗಿದೆ.
2) ವೇಷಾಧಾರಿ ಭಕ್ತಾದಿಗಳು ಅಂಗಡಿಗಳಿಗೆ ತೆರಳಿ ಬಲವಂತವಾಗಿ ಹಣವನ್ನು ನೀಡುವಂತೆ ಒತ್ತಾಯಿಸುವುದನ್ನು ನಿಷೇಧಿಸಲಾಗಿದೆ.
3) ವೇಷಾಧಾರಿ ಭಕ್ತಾದಿಗಳು ಮಹಿಳೆಯರು ಮತ್ತು ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಹಾಗೂ ಮಧ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸಿ ಅವಾಚ್ಯ ಪದಗಳಿಂದ ಬೈಯುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುವುದನ್ನು ನಿಷೇಧಿಸಲಾಗಿದೆ.
4) ಅಯ್ಯಪ್ಪ ದೇವಸ್ಥಾನದ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಭಾರಿ ವಾಹನಗಳ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
5) ವೇಷಾಧಾರಿ ಭಕ್ತಾದಿಗಳು ದೇಹದ ಮೇಲೆ ಎಣ್ಣೆಯನ್ನು ಸುರಿದುಕೊಂಡು ದೊಣ್ಣೆ ಮತ್ತು ಇತರೇ ಮಾರಕಾಯುಧಗಳನ್ನು ಹಿಡಿದುಕೊಂಡು ದೇವಸ್ಥಾನದ ಒಳಗೆ ಹಾಗೂ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.
6) ದೇವಸ್ಥಾನದ ಆವರಣದಲ್ಲಿ ಸಜೀವ ಕೋಳಿಗಳನ್ನು ಎಸೆಯುವುದನ್ನು ಹಾಗೂ ಪ್ರಾಣಿ ಹಿಂಸೆ ಮಾಡುವುದನ್ನು ನಿಷೇಧಿಸಲಾಗಿದೆ.
ಈ ಸೂಚನೆಯನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



