ಪ್ರಕೃತಿ ಮತ್ತು ಭೂಮಿಯ ರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿಯು ಭೂಮಿಯ ಮೇಲಿರುವ ಸರ್ವರ ಮೇಲಿದೆ ಎಂದು ಎರಡನೇ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ. ಎಸ್. ನಟರಾಜ ಅಭಿಪ್ರಾಯ ವ್ಯಕ್ತಪಡಿಸಿದರು . ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಅರಣ್ಯ ಇಲಾಖೆ, ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ವಿರಾಜಪೇಟೆ ಇವರ ಸಂಯುಕ್ತ ಆಶಯದಲ್ಲಿ ಬುಧವಾರ ವಿಶ್ವ ಭೂ ದಿನಾಚರಣೆಯನ್ನು ಆಚರಿಸಲಾಯಿತು.
ಗಿಡಕ್ಕೆ ನೀರನ್ನು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾ. ಎಸ್. ನಟರಾಜ ವಿಶ್ವ ಭೂ ದಿನಾಚರಣೆ ಹಿನ್ನೆಲೆಯಲ್ಲಿ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಆಚರಿಸುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಭೂಮಿಯ ಮೇಲಿರುವಂತಹ ಪರಿಸರ, ಅರಣ್ಯ ಸಂಪತ್ತು, ವನ್ಯಜೀವಿ ಹಾಗೂ ಇನ್ನಿತರ ಜೀವ ಸಂಕುಲಗಳನ್ನು ತಾಯಿಯಂತೆ ಪೋಷಿಸುತ್ತಿರುವವಳು ಭೂಮಿ. ಆದ್ದರಿಂದ ಭೂಮಿಯ ರಕ್ಷಣೆಯನ್ನು ಮಾಡುವುದು ಅತಿ ಮುಖ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ, ನದಿಗಳನ್ನು ಕಲುಷಿತ ಮಾಡುವುದು,ಶ ಅತಿಯಾದ ಪ್ಲಾಸ್ಟಿಕ್ ಬಳಕೆ, ರಾಸಾಯನಿಕಗಳ ಬಳಕೆಯಿಂದ ಮಣ್ಣನ್ನು ನಾಶ ಮಾಡುತ್ತಿದ್ದಾನೆ. ಇದರಿಂದಾಗಿ ಮುಂದಿನ ಪೀಳಿಗೆಗೆ ಸಂಪೂರ್ಣವಾಗಿ ಅಳಿವಿನಂಚಿನ ಪ್ರಕೃತಿ, ಭೂಮಿಯನ್ನು ನೀಡಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಪರಿಸರಕ್ಕೆ ಅನುಕೂಲವಾಗುವಂತಹ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿ ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರವನ್ನು ನೀಡುವುದರೊಂದಿಗೆ ಅರಣ್ಯವನ್ನು ಸಂರಕ್ಷಿಸುವ ಕೆಲಸ ಮಾಡಿಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಹೆಚ್. ಜಗನ್ನಾಥ್ ಮಾತನಾಡಿ ಭೂಮಿಯಲ್ಲಿ ಸಮತೋಲನವನ್ನು ಕಾಪಾಡಲು ಪ್ರತಿಯೊಂದು ಜೀವಿಯು ಅವಶ್ಯಕ. ಆದ್ದರಿಂದ ಪರಿಸರದ ಬಗ್ಗೆ ಸರ್ವರಲ್ಲಿಯು ಗೌರವವಿರಲಿ. ಪರಿಸರವನ್ನು ನಾಶಮಾಡುವ ಕೆಲಸ ನಡೆದಂತಹ ಸಂದರ್ಭ ಅದನ್ನು ವಿರೋಧಿಸುವಂತಹ ಕಾರ್ಯ, ಗಿಡ, ಮರ, ಜೀವಿಗಳು, ಪರಿಸರ ಮಣ್ಣನ್ನು ಉಳಿಸುವ ಪರವಾಗಿ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೀವ ವೈವಿಧ್ಯ ಇದ್ದರೇ ಮಾತ್ರ ವಿಕಸನ ಸಾಧ್ಯ. ಭೂಮಿಯ ಮೇಲೆ ಸಣ್ಣ ಬೀಜ, ಎರೆ ಹುಳು, ಪಕ್ಷಿ, ಪ್ರಾಣಿ , ಸಸ್ಯ ಪ್ರತಿಯೊಂದು ಕೂಡ ತನ್ನದೇ ಆದ ಮಹತ್ವವನ್ನು ಹೊಂದಿದ್ದು ಭೂಮಿಗೆ ,ಪ್ರಕೃತಿಗೆ ತನ್ನದೇಯಾದ ಕೊಡುಗೆಯನ್ನು ನೀಡುತ್ತದೆ. ಆದ್ದರಿಂದ ಮನುಷ್ಯನು ಕೂಡ ಈ ಭೂಮಿಯಲ್ಲಿ ಹುಟ್ಟಿದ ತನ್ನ ಋಣವನ್ನು ತೀರಿಸುವ ಉದ್ದೇಶದಿಂದಾದರು ಪರಿಸರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವುದರೊಂದಿಗೆ ನಮ್ಮ ಸ್ವಾರ್ಥಕ್ಕಾಗಿ ಭೂಮಿಯನ್ನು ನಾಶ ಮಾಡದೆ ವಿಶೇಷ ಆಸಕ್ತಿವಹಿಸಿ ಭೂಮಿಯನ್ನು ಕಾಪಾಡುವ ಗುಣ ಬೆಳೆಸಿಕೊಳ್ಳಬೇಕೆಂದರು .
ಕಾರ್ಯಕ್ರಮವನ್ನು ಉದ್ದೇಶಿಸಿ ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ. ಕೆ. ಪೂವಣ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಾಸಿನಾ ಬಾನು ಮಾತನಾಡಿದರು. ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ವಿರಾಜಪೇಟೆ ಮುಖ್ಯಸ್ಥ ಜಿ.ಎಸ್. ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು .
ಕಾರ್ಯಕ್ರಮದ ವೇದಿಕೆಯ ಮೇಲೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾ. ಪ್ರದೀಪ್ ಪೋತೆದಾರ್ , ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಪ್ರಾಂಶುಪಾಲೆ ಟಿ.ಕೆ. ವಿನಿತ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಉಪನ್ಯಾಸಕ ವರ್ಗ ವಿದ್ಯಾರ್ಥಿ ವರ್ಗ ಕಾವೇರಿ ಪದವಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು .



