ಮಡಿಕೇರಿ : ಸ್ಥಳೀಯ ಮಕ್ಕಳಿಂದಲೇ ರೂಪುಗೊಂಡ ಕೊಡಗಿನ ಪ್ರಪ್ರಥಮ ಮಕ್ಕಳ ಯಕ್ಷಗಾನ ತಂಡ ನಡೆಸಿಕೊಟ್ಟ ಎರಡು ಪ್ರಸಂಗಗಳು ಮಡಿಕೇರಿಯ ಮೈತ್ರಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಯಶಸ್ವಿ ಪ್ರದರ್ಶನ ಕಂಡವು.
ಕಲಾಕಾವ್ಯ ನಾಟ್ಯಶಾಲೆ ಪ್ರಸ್ತುತ ಪಡಿಸಿದ ವೀರ ಅಭಿಮನ್ಯು ಮತ್ತು ಶ್ರೀದೇವಿ ಮಹಾತ್ಮೆ ಎಂಬ ಪ್ರಸಂಗವನ್ನು ಪುಟಾಣಿ ಮಕ್ಕಳು ಅಮೋಘವಾಗಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಹೃದಯ ಗೆದ್ದರು. ಲೋಕಕಂಟಕನಾದ ಮಹಿಷಾಸುರನನ್ನು ಜಗನ್ಮಾತೆ ಸಂಹರಿಸುವ `ಶ್ರೀದೇವಿ ಮಹಾತ್ಮೆ’ ಪ್ರಸಂಗದಲ್ಲಿ ಮಹಿಷ, ದೇವಿ ಮತ್ತು ಸಿಂಹದ ಪಾತ್ರ ಮನೋಜ್ಞವಾಗಿತ್ತು. ಮಹಿಷಾಸುರ ಮತ್ತು ಸಿಂಹ ಪ್ರೇಕ್ಷಕರ ನಡುವಿಂದ ಎದ್ದುಬರುವ ಸನ್ನಿವೇಶ ಮತ್ತು ಅಷ್ಟಭುಜೆ ಶ್ರೀದೇವಿಯ ರಂಗಪ್ರವೇಶ ರೋಮಾಂಚಕಾರಿಯಾಗಿತ್ತು. ಮೊದಲ ಬಾರಿಗೆ ಯಕ್ಷಗಾನ ವೇದಿಕೆ ಏರುತ್ತಿರುವ ಮಕ್ಕಳು, ಯಾವುದೇ ಭಯ ಸಂಕೋಚಗಳಿಲ್ಲದೆ ಅಭಿನಯಿಸಿ, ಪೇಕ್ಷಕರು ಮೂಗಿನ ಮಲೆ ಬೆರಳಿಡುವಂತೆ ತಮ್ಮ ಪ್ರತಿಭೆ ಮೆರೆದರು.
ಕೌರವರ `ಚಕ್ರವ್ಯೂಹ’ ಬೇಧಿಸುವ ವೀರ ಅಭಿಮನ್ಯುವಿನ ಸಾಹಸಗಾಥೆಯನ್ನು ಮಕ್ಕಳು ಪ್ರಸ್ತುತಪಡಿಸಿದರು. ಭಾಗವತರ ಹಾಡು, ಚಂಡೆ ಮದ್ದಲೆ ತಾಳಕ್ಕೆ ತಕ್ಕಂತೆ ನರ್ತಿಸುತ್ತಾ, ಸಂಭಾಷಣೆ ಹೇಳುತ್ತಾ ಯಕ್ಷಗಾನ ವೈಭವಕ್ಕೆ ಕಳೆತಂದುಕೊಟ್ಟರು.
ಸುಳ್ಯದ ಬಾಲಕೃಷ್ಣ ನಾಯರ್ ಗರಡಿಯಲ್ಲಿ ಕಳೆದ ಆರು ತಿಂಗಳ ತರಬೇತಿ ಪಡೆದಿರುವ ಕಲಾಕಾವ್ಯ ನಾಟ್ಯ ಶಾಲೆಯ ಮಕ್ಕಳು, ಕೊಡಗಿನಲ್ಲೂ ಯಕ್ಷಗಾನ ಕಲೆಯನ್ನು ಗಟ್ಟಿಗೊಳಿಸಬಹುದು ಎಂದು ನಿರೂಪಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕಲಾಕಾವ್ಯ ನಾಟ್ಯಶಾಲೆಯ ಸ್ಥಾಪಕಿ ಕಾವ್ಯಶ್ರೀ, ಯಕ್ಷಗಾನ ಗುರುಗಳಾದ ತಾರಾನಾಥ ಸವಣೂರು, ಭಾಗವತರಾದ ಸುಬ್ರಾಯ ಸಂಪಾಜೆ ಹಾಗೂ ಬಾಲಭವನದ ಅಧ್ಯಕ್ಷ ರವೀಂದ್ರ ರೈ ಉಪಸ್ಥಿತರಿದ್ದರು. ಮಕ್ಕಳಿಗೆ ತರಬೇತಿ ನಿಡಿದ ಬಾಲಕೃಷ್ಣ ನಾಯರ್ ಮತ್ತು ಭರತನಾಟ್ಯ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು.



