ವರದಿ : ರಜಿತ ಕಾರ್ಯಪ್ಪ(೯೪೮೧೭೭೧೮೫೧)
ವೀರಾಜಪೇಟೆ : ಪ್ರಕೃತಿಯ ಸೊಬಗಿನ ನಡುವೆ ‘ಮಳೆ ದೇವರು’ಎಂದು ಹೆಸರು ಗಳಿಸಿರುವ ಮಲೆ ಮಹಾದೇಶ್ವರ (ಈಶ್ವರನ) ದೇವಾಲಯ ಭಕ್ತರ ಕಣ್ಮನ ಸೆಳೆಯುತ್ತಿದೆ.
ವಾರ್ಷಿಕೋತ್ಸವಕ್ಕೆ ಮಲೆ ಮಹಾದೇಶ್ವರ ಸಜ್ಜಾಗಿ ನಿಂತಿದೆ. ಅಂದಾಜು ೮೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯ ಇದಾಗಿದ್ದು, ವಿರಾಜಪೇಟೆ ಪಟ್ಟಣದಿಂದ ಅಮ್ಮತ್ತಿ ಮುಖ್ಯ ರಸ್ತೆಯ ಮಗ್ಗುಲ ಜಂಕ್ಷನ್ ಬಳಿಯಿಂದ ದಂತ ವೈದ್ಯ ಕಾಲೇಜು ರಸ್ತೆಯಲ್ಲಿ ಸಾಗಿ ಮಲೆತಿರಿಕೆ ಬೆಟ್ಟ ಏರಿದರೆ ದೇವಾಲಯ ಸಿಗುತ್ತದೆ.
ಬೆಟ್ಟ ಏರುವಾಗ ದಾರಿ ಮಧ್ಯೆ ವಿರಾಜಪೇಟೆ ಪಟ್ಟಣದ ಪೂರ್ತಿ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಗ್ರಾಮಕ್ಕೆ ಸೇರಿದ ಬೆಟ್ಟದ ತುದಿಯಲ್ಲಿರುವ ಈ ದೇವಾಲಯದಿಂದ ಸುತ್ತಲಿನ ಪರಿಸರವನ್ನು ವೀಕ್ಷಿಸುವುದೇ ಕಣ್ಣಿಗೊಂದು ಹಬ್ಬ.
******ಪವಾಡ****
ಕಣ್ಣು ಕಾಣದೆ ಇದ್ದ ಯುವಕನಿಗೆ ಇಲ್ಲಿ ಬೇಡಿಕೊಂಡ ಬಳಿಕ ಕಣ್ಣು ಬಂದದ್ದು, ಮೈಗೆ ದೇವರು ಬರುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಲು ಯತ್ನಿಸಿದಾಗ ಆತನಿಗೆ ಕಣ್ಣು ಕಾಣದಂತಾಗಿ, ಪುನಃ ದೇವರನ್ನು ಬೇಡಿದ ಬಳಿಕ ಪರಿಹಾರ ದೊರೆತದ್ದು, ೨೦೦ ವರ್ಷದ ಹಿಂದೆ ಪಟ್ಟಣದಲ್ಲಿ ಸಿಡುಬು ರೋಗದಿಂದ ಅನೇಕರು ಬಳಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾಗ ವಾರ್ಷಿಕೋತ್ಸವ ಸಂದರ್ಭ ದೇವರ ಮೆರವಣಿಗೆ ಮನೆ ಮನೆಗೆ ತೆರಳಿದ ಬಳಿಕ ರೋಗ ಇನ್ನಿಲ್ಲದಂತಾದದ್ದು ಮುಂತಾದ ಪವಾಡಗಳನ್ನು ಹಿರಿಯರು ನೆನೆಯುತ್ತಾರೆ. ಇಂದಿಗೂ ಶಿವರಾತ್ರಿ ಸಂದರ್ಭ ಪೂಜೆಯ ವೇಳೆ ಮಳೆಗೆ ಪ್ರಾರ್ಥನೆ ಮಾಡಿದರೆ ೨-೩ ದಿನದಲ್ಲಿ ಮಳೆ ನಿಶ್ಚಿತ ಎನ್ನಲಾಗುತ್ತದೆ.
*****ಉತ್ಸವ******
ಈ ದೇವರ ಉತ್ಸವ ಪ್ರತಿ ವರ್ಷ ಮಾರ್ಚ್ ೧೫ರಿಂದ ೨೦ ರವರೆಗೆ ನಡೆಯುತ್ತದೆ. ಉತ್ಸವದ ಸಂದರ್ಭ ಪಟ್ಟಣದಲ್ಲಿ ದೇವರ ಮೆರವಣಿಗೆ ನಡೆಯುತ್ತದೆ. ಆಗ ಈ ದೇವಾಲಯಕ್ಕೆ ಸಂಬಂಧಿಸಿದ ಪುರಾತನ ಬಸವೇಶ್ವರ ದೇವಾಲಯ, ರಾಮಲಾಲ ಕಟ್ಟೆ, ಜೇನು ಮೇಣ ಸಹಕಾರ ಸಂಘದ ಬಳಿ ಇರುವ ಈಶ್ವರ ದೇವಾಲಯಗಳಿಗೆ ತೆರಳುತ್ತದೆ. ಚೆಂಬೆಬೆಳ್ಳೂರು ಗ್ರಾಮದ ದೇವರ ಕೆರೆಯಲ್ಲಿ ಉತ್ಸವ ವೇಳೆ ಝಳಕವು ನಡೆಯುತ್ತದೆ.
****ದಂತಕಥೆ****
ಹಿಂದೆ ದಟ್ಟ ಅರಣ್ಯದಿಂದ ಕೂಡಿದ್ದ ಈ ಬೆಟ್ಟಕ್ಕೆ ಸುತ್ತಲಿನ ಪ್ರದೇಶದ ಬಹಳಷ್ಟು ಮಂದಿ ಕಟ್ಟಿಗೆಗಾಗಿ ಬರುತ್ತಿದ್ದರು. ಹೀಗೆ ಕಟ್ಟಿಗೆಗೆ ಬಂದ ವ್ಯಕ್ತಿಯೊಬ್ಬ ಕಟ್ಟಿಗೆಯನ್ನು ಸಂಗ್ರಹಿಸಿ ಕಟ್ಟಿಗೆಯನ್ನು ಕಟ್ಟಲು ಬಳ್ಳಿಯೊಂದನ್ನು ಕತ್ತರಿಸಿದಾಗ ಅದರಲ್ಲಿ ರಕ್ತ ಬರುತ್ತಿರುವುದನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ. ಆಗ ಬಳ್ಳಿಯ ಮೂಲವನ್ನು ಹುಡುಕುತ್ತಾ ಹೋದ ಅವನಿಗೆ ಬೆಟ್ಟದ ಮೇಲ್ಭಾಗದಲ್ಲಿದ್ದ ಶಿವಲಿಂಗ ಕಾಣಿಸಿತು ಎನ್ನುವ ನಂಬಿಕೆ ಒಂದೆಡೆಯಾದರೆ, ಅಗಸ್ತ್ಯ ಮುನಿಗಳು ಎರಡು ಶಿವಲಿಂಗವನ್ನು ತಂದು ಒಂದನ್ನು ಇಲ್ಲಿ ಪ್ರತಿಷ್ಠಾಪಿಸಿದ್ದರೆ ಮತ್ತೊಂದು ಸಮೀಪದ ಬಾವಿಯೊಳಗೆ ಇಟ್ಟಿದ್ದಾರೆ ಎನ್ನುವ ಮತ್ತೊಂದು ನಂಬಿಕೆ ಇಲ್ಲಿದೆ.
ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಿಂದ ದೇವಾಲಯ ನಿರಂತರ ಅಭಿವೃದ್ಧಿ ಹೊಂದುತ್ತಾ ಬಂದಿದೆ.
****** ದೇವಾಲಯ************
ದೇವಾಲಯದ ಆವರಣವನ್ನು ಪ್ರವೇಶಿಸುವಾಗ ಮೊದಲು ಚಾಮುಂಡಿ, ಬ್ರಹ್ಮರಾಕ್ಷಸ ಹಾಗೂ ಹಿಂಭಾಗದಲ್ಲಿ ಕಾಡು ಅಯ್ಯಪ್ಪ ದೇವರ ಸ್ಥಾನವಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ದೇವಾಲಯದ ಉತ್ಸವ ನೆರವೇರುತ್ತದೆ. ಹಬ್ಬದ ಕಟ್ಟು, ಕೊಡಿ ಮರ ನಿಲ್ಲಿಸುವುದು ಹಾಗೂ ಬಂಡಾರ ತರುವ ಕಾರ್ಯಕ್ರಮ, ಉತ್ಸವ ಮೆರವಣಿಗೆ, ಅವಬೃತ ಸ್ನಾನ, ಕೊಡಿಮರ ಇಳಿಸುವುದು ಹಾಗೂ ಬಂಡಾರ ತೆಗೆಯುವ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಅಲ್ಲದೇ ಶಿವರಾತ್ರಿ ಹಾಗೂ ಕಾರ್ತಿಕ ಮಾಸದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ವರ್ಷಕ್ಕೆ ಒಮ್ಮೆ ಚೆಂಬೆಬೆಳ್ಳೂರಿನಲ್ಲಿನ ದೇವರ ಕೆರೆಯಲ್ಲಿ ಹಾಗೂ ೧೨ ವರ್ಷಕ್ಕೆ ಒಮ್ಮೆ ಕಾವೇರಿ ನದಿಯಲ್ಲಿ ದೇವರಿಗೆ ಅವಬೃತ ಸ್ನಾನ ಮಾಡಿಸಲಾಗುತ್ತದೆ.
ದೇವಾಲಯದಲ್ಲಿ ಅಭಿಷೇಕ, ನೈವೇದ್ಯ, ಬಿಲ್ವಾರ್ಚನೆ ಹಾಗೂ ಮೃತ್ಯುಂಜಯ ಪೂಜೆ ಸೇರಿ ವಿವಿಧ ಧಾರ್ಮಿಕ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಪ್ರತಿ ಸೋಮವಾರ ಇಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ದೇವಾಲಯಕ್ಕೆ ಸುತ್ತಲಿನ ಏಳು ಗ್ರಾಮಸ್ಥರು ಪೂಜೆಯನ್ನು ನೆರವೇರಿಸುತ್ತಾರೆ.
*****ಮಲೆ ಮಹಾದೇಶ್ವರ ದೇವಾಲಯದ ವಾರ್ಷಿಕೋತ್ಸವ ಪೂಜಾ ವಿವರಗಳು****
ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ವಾರ್ಷಿಕೋತ್ಸವವು ಮಾರ್ಚ್ ೧೫ರಿಂದ ೨೦ ರವರೆಗೆ ನಡೆಯಲಿದೆ. ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು, ಕುಕ್ಲೂರು ಭಾಗಗಳಿಗೆ ಸೇರಿದ ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಇದಾಗಿದ್ದು ಮಾರ್ಚ್ ೧೫ ರಂದು ಬೆಳಗ್ಗೆ ೯ ಗಂಟೆಗೆ ಗಣಪತಿ ಹೋಮದೊಂದಿಗೆ ವಾರ್ಷಿಕೋತ್ಸವದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತದೆ.
೧೫ ರಂದು ಅಪರಾಹ್ನ ೪ ಗಂಟೆಗೆ ಕುಂದಿರ ಮನೆಯಿಂದ ಭಂಡಾರ ಬರುವುದು, ಸಂಜೆ ೭ ಗಂಟೆಗೆ ಕೊಡಿಮರ ನಿಲ್ಲಿಸುವುದು, ರಾತ್ರಿ ೮ ಗಂಟೆಗೆ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
ಮಾರ್ಚ್ ೧೬ ರಂದು ಬೆಳಿಗ್ಗೆ ೫ ಗಂಟೆಗೆ ಇರುಬೆಳಕು, ಹಗಲು ೧೧ ಗಂಟೆಗೆ ನಾಗನ ಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ರಾತ್ರಿ ೮ ಗಂಟೆಗೆ ಕಾಪು, ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
ತಾರೀಕು ೧೭ರಂದು ಬೆಳಿಗ್ಗೆ ೫ ಗಂಟೆಗೆ ಇರುಬೆಳಕು ನಡೆಯಲಿದೆ. ೧೧ ಗಂಟೆಗೆ ಅಯ್ಯಪ್ಪನ ಸ್ಥಾನದಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ೮ ಗಂಟೆಗೆ ಇರುಬೆಳಕು, ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ.
ತಾರೀಕು ೧೮ ರಂದು ಬೆಳಿಗ್ಗೆ ೫ ಗಂಟೆಗೆ ಇರುಬೆಳಕು, ಮಧ್ಯಾಹ್ನ ೧೨ ಗಂಟೆಗೆ ದೊಡ್ಡ ಹಬ್ಬ, ಎತ್ತು ಪೋರಾಟ, ತೆಂಗಿನಕಾಯಿ ಗುಂಡು ಹೊಡೆಯುವುದು ನಡೆಯಲಿದೆ.
೧ ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, ೩ ಗಂಟೆಗೆ ದೇವರು ಹೊರಗೆ ಬರುವುದು, ಸಂಜೆ ೬ ಗಂಟೆಗೆ ಪೇಟೆ ಮೆರವಣಿಗೆ ನಡೆಯಲಿದೆ.
ತಾರೀಕು ೧೯ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ, ಬಸವನ ಕಟ್ಟೆಯಲ್ಲಿ ಪೂಜೆ, ಸಂಜೆ ೬ ಗಂಟೆಗೆ ದೇವರ ಜಳಕ, ಅವಬೃತ ಸ್ನಾನ, ರಾತ್ರಿ ೮ ಗಂಟೆಗೆ ದೇವರ ಪ್ರದಕ್ಷಿಣೆ ನೃತ್ಯ ನಡೆಯಲಿದೆ.
ತಾ.೨೦ರಂದು ಹಗಲು ೧೧ ಗಂಟೆಗೆ ಕೊಡಿಮರ ಇಳಿಸುವುದು ೧೨ ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ ನಡೆಯಲಿದೆ.



