ಎ.ಎಸ್.‌ ಪೊನ್ನಣ್ಣ ಅಭಿವೃದ್ಧಿಯ ಹರಿಕಾರ – ಅವರಿಗೆ ಸಚಿವ ಸ್ಥಾನ ನೀಡಬೇಕು : ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ಆಗ್ರಹ

Share this post :

ವಿರಾಜಪೇಟೆ : ನೂತನ ಸಚಿವ ಸಂಪುಟದಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಹಾಗೂ ವಿರಾಜಪೇಟೆ ತಾಲೂಕು ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಜೋಕೀಂ ರಾಡ್ರಿಗಸ್ ಮಾತನಾಡಿ, ಪೊನ್ನಣ್ಣರವರಿಗೆ ಸಚಿವ ಸ್ಥಾನ ನೀಡಿದಲ್ಲಿ ಕೊಡಗು ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ. ಇಂದು ಶಾಸಕರು ಸಂಪೂರ್ಣವಾಗಿ ಅನುದಾನವನ್ನು ತಂದು ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಎಲ್ಲೆಡೆ ರಸ್ತೆಗಳು ಕಾಂಕ್ರಿಟೀಕರಣಗೊಳ್ಳುತಿದ್ದು ಶಾಸಕರ ಕಾರ್ಯವೈಖರಿಗೆ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು.
ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ವಿರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಅಗಸ್ಟೀನ್ ಕ್ಷೇವಿಯರ್ ಮಾತನಾಡಿ, ಪೊನ್ನಣ್ಣರವರು ಕೊಡವ ಸಮುದಾಯದ ಶಾಸಕರಾಗಿದ್ದು, ಬಹಳ ವರ್ಷಗಳಿಂದ ಸಚಿವ ಸ್ಥಾನ ಸಿಗುವಲ್ಲಿ ಜಿಲ್ಲೆಗೆ ಪ್ರಾತಿನಿಧ್ಯವಿಲ್ಲದಾಗಿದೆ. ಬಿ ಜೆ ಪಿ ಭದ್ರಕೋಟೆಯಾದ ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಶಾಸಕರ ಶ್ರಮ ಅಪಾರವಾಗಿದ್ದು ಎಲ್ಲರಿಗೂ ಸಮಾನ ನ್ಯಾಯವನ್ನು ಒದಗಿಸುವ ಕಾರ್ಯವನ್ನು ಶಾಸಕರು ಮಾಡುತ್ತಿದ್ದು ಅವರಿಗೆ ಸಚಿವ ಸ್ಥಾನವನ್ನು ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಂಚಾಲಕ ಜ್ಯೂಡಿವಾಸ್ ಮಾತನಾಡಿ, ಕೊಡಗು ತನ್ನದೇಯಾದ ಭೌಗೋಳಿಕ ಪ್ರದೇಶವನ್ನು ಹೊಂದಿದೆ. ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ರವರು ಕ್ರೀಡೆ, ಧಾರ್ಮಿಕ ಕಾರ್ಯಗಳಿಗೆ ಮಹತ್ವ ನೀಡಿದ್ದು, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ತಲಕಾವೇರಿ, ಭಾಗಮಂಡಲ ಹಾಗೂ ಇನ್ನಿತರ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಘನತೆವೆತ್ತ ಸರ್ಕಾರವು ನೂತನ ಸಚಿವ ಸಂಪುಟದಲ್ಲಿ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ, ಉಪಾಧ್ಯಕ್ಷ ಡ್ಯಾನಿಯಲ್ ಸಲ್ಡಾನಾ ಉಪಸ್ಥಿತರಿದ್ದರು.

coorg buzz
coorg buzz