ಪೊನ್ನಂಪೇಟೆ : ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಗೂ ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ದಿ. ಪುಚ್ಚಿಮಾಡ ತಿಮ್ಮಯ್ಯ, ದಿ.ಪುಚ್ಚಿಮಾಡ ಚೋಂದಮ್ಮ ತಿಮ್ಮಯ್ಯ ಹಾಗೂ ದಿ. ಪುಚ್ಚಿಮಾಡ ಮೀನಾ ಸುಬ್ಬಯ್ಯ ಜ್ಞಾಪಕಾರ್ಥ ಕಾವೇರಿ ಕಾಲೇಜು ಸಭಾಂಗಣದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವೀರಾಜಪೇಟೆ ಕಾವೇರಿ ಪದವಿ ಕಾಲೇಜು ಸಮಗ್ರ ವಿನ್ನರ್ ಪ್ರಶಸ್ತಿ ಪಡೆದುಕೊಂಡರೆ,
ಪೊನ್ನಂಪೇಟೆ ಹಳ್ಳಿಗಟ್ಟು ಸಿಐಟಿ ಕಾಲೇಜು ಸಮಗ್ರ ರನ್ನರ್ ಪ್ರಶಸ್ತಿ ಪಡೆದುಕೊಂಡಿತು.
ಕನ್ನಡ ವಿಭಾಗದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜಿನ ರಕ್ಷಿತಾ ಬಿ.ಎಸ್ ಪ್ರಥಮ, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಮನ.ಕೆ.ಆರ್ ದ್ವಿತೀಯ, ಸಿಐಟಿ ಕಾಲೇಜಿನ ಅದ್ವಿಕಾ ತೃತೀಯ ಬಹುಮಾನ ಪಡೆದುಕೊಂಡರು. ಇಂಗ್ಲಿಷ್ ವಿಭಾಗದಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಮೊಹಮದ್ ಅಜ್ನಾಸ್ ಪ್ರಥಮ, ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಮುತ್ತಮ್ಮ. ಎನ್. ಬಿ ದ್ವಿತೀಯ, ಸಿ. ಐ. ಟಿ. ಕಾಲೇಜಿನ ರಚಲ್ ನೀಲಮ್ಮ ತೃತೀಯ ಸ್ಥಾನ ಪಡೆದುಕೊಂಡರು.
ಬಿಳುಗುಂದ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ಚೋಕಿರ ಅನಿತಾ, ಮಡಿಕೇರಿ ಆಕಾಶವಾಣಿ ಉದ್ಗೋಷಕಿ ಬಾಳೆಯಡ ದಿವ್ಯ ಮಂದಪ್ಪ, ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಭಾಷಣ ಎಂದರೆ ಶಬ್ದಗಳಿಗೆ ಜೀವ ತುಂಬುವ ಕಲೆ: ಬಿ. ಜಿ. ಅನಂತ ಶಯನ :
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಕ್ತಿ’ಪತ್ರಿಕೆ ಸಲಹಾ ಸಂಪಾದಕ ಬಿ.ಜಿ ಅನಂತ ಶಯನ ಮಾತನಾಡಿ, ಭಾಷಣ ಎಂದರೆ ಕೇವಲ ಪದಗಳನ್ನು ಉಚ್ಛರಿಸುವುದಲ್ಲ. ಶಬ್ದಗಳಿಗೆ ಜೀವ ತುಂಬುವ ಕಲೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಭಾಷಣ ಹಾಗೂ ಡಿಬೇಟ್ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸುತ್ತವೆ. ಜೀವನವು ನಿಂತ ನೀರಿನಂತೆ ಇರಬಾರದು. ನಿರಂತರವಾಗಿ ಹರಿಯುವ ನದಿಯಂತೆ ಮುಂದಕ್ಕೆ ಸಾಗಬೇಕು. ಮುಂದಿನ ಗುರಿಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಭಾಷಣ ಹಾಗೂ ಡಿಬೇಟ್ ನಡುವಿನ ವ್ಯತ್ಯಾಸವನ್ನು ವಿವರಿಸಿದ ಅವರು, ಡಿಬೇಟ್‌ನಲ್ಲಿ ತ್ವರಿತ ಚಿಂತನೆ, ತರ್ಕಶಕ್ತಿ ಹಾಗೂ ಪ್ರತಿವಾದಕ್ಕೆ ಉತ್ತರಿಸುವ ಸಾಮರ್ಥ್ಯ ಮುಖ್ಯವಾಗಿದ್ದು, ಭಾಷಣದಲ್ಲಿ ವಾಕ್ಪಟುತ್ವ, ಧ್ವನಿ ನಿಯಂತ್ರಣ, ಸ್ಪಷ್ಟ ಉಚ್ಛಾರಣೆ ಹಾಗೂ ಆತ್ಮವಿಶ್ವಾಸ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.
ಶಂಕರಾಚಾರ್ಯರ ಜೀವನದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಅಲ್ಪ ವಯಸ್ಸಿನಲ್ಲಿಯೇ ಅಪಾರ ಜ್ಞಾನ ಸಂಪಾದಿಸಿ ಅದ್ವೈತ ತತ್ವವನ್ನು ಜಗತ್ತಿಗೆ ಪರಿಚಯಿಸಿದ ಅವರ ಜೀವನವು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದ ಅವರು, ಪರಿಶ್ರಮ, ಜ್ಞಾನ ಹಾಗೂ ಆತ್ಮವಿಶ್ವಾಸದಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂಬ ಸಂದೇಶವನ್ನು ನೀಡಿದರು.
ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಭಾಷಣ ಸ್ಪರ್ಧೆಯ ಪ್ರಾಯೋಜಕರು ಹಾಗೂ ಹಳೇ ವಿದ್ಯಾರ್ಥಿ ಪಿ. ಟಿ. ಸುಭಾಷ್ ಸುಬ್ಬಯ್ಯ, ಪುಚ್ಚಿಮಾಡ ಅಶೋಕ್ ಅಚ್ಚಪ್ಪ, ಪುಚ್ಚಿಮಾಡ ಲಾಲ ಪೂಣಚ್ಚ, ಕಾವೇರಿ ಅಲುಮ್ನೈ ಅಸೋಸಿಯೇಷನ್ ಉಪಾಧ್ಯಕ್ಷ ಕೊಂಗಂಡ ಪಿ. ಅಚ್ಚಯ್ಯ, ಕಾರ್ಯದರ್ಶಿ ಪಳಂಗಂಡ ವಾಣಿ ಚಂಗಪ್ಪ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭ ಕಾವೇರಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕುಪ್ಪಂಡ ಬೆಳಿಯಪ್ಪ, ಅಲುಮ್ನೈ ಅಸೋಸಿಯೇಷನ್ ಖಜಾಂಚಿ ಕಳ್ಳಿಚಂಡ ಮುತ್ತಪ್ಪ, ಪದಾಧಿಕಾರಿಗಳಾದ ಬಲ್ಯಮಿದೇರಿರ ಆಶಾ ಶಂಕರ್, ಜಮ್ಮಡ ಜಯ ಜೋಯಪ್ಪ, ಜಮ್ಮಡ ಶಂಭು ಬಿದ್ದಪ್ಪ, ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್.ಭಾರತಿ, ಭಾಷಣ ಸ್ಪರ್ಧೆ ಸಂಚಾಲಕಿ ಡಾ.ಸಿ.ಎಂ.ರೇವತಿ, ಅಲುಮ್ನೈ ಅಸೋಸಿಯೇಷನ್ ಸಂಚಾಲಕಿ ಎಸ್. ಎಂ. ರಜನಿ, ಹಾಗೂ ಉಪನ್ಯಾಸಕರು ಇದ್ದರು. ವಿದ್ಯಾರ್ಥಿನಿ ಕ್ರೀಷ್ಮ ಪ್ರಾರ್ಥಿಸಿ, ಡಾ. ರೇವತಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಎನ್. ಪಿ ರೀತಾ ವಂದಿಸಿ, ಹೆಲನ್ ಮತ್ತು ಶಶಿಕಲಾ ನಿರೂಪಿಸಿದರು.




