ಪೊನ್ನಂಪೇಟೆ: ಮುಂಬರುವ ಪವಿತ್ರ ಹಜ್ಜ್ ಕಾಲಾವಧಿಯಲ್ಲಿ ಹಜ್ಜ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಲು ಸೌದಿ ಅರೇಬಿಯಾ ದೇಶಕ್ಕೆ ಕರ್ತವ್ಯ ನಿಮಿತ್ತ ತೆರಳುತ್ತಿರುವ ಕರ್ನಾಟಕ ಅಪರಾಧ ತನಿಖೆ ವಿಭಾಗದ (CID) ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿ.ಪಿ.ಐ.) ಕುಪ್ಪೋಡಂಡ ಎ. ರಫೀಕ್ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಬೀಳ್ಕೊಡಲಾಯಿತು. ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಸೂಫಿ ಹಾಜಿಯವರ ಅಧ್ಯಕ್ಷತೆಯಲ್ಲಿ ಎಡಪಾಲದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಆಡಳಿತ ಮಂಡಳಿ ಪದಾಧಿಕಾರಿಗಳ ತಂಡ ರಫೀಕ್ ಅವರಿಗೆ ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಹಜ್ಜ್ ಪ್ರಯಾಣಕ್ಕೆ ಬೀಳ್ಕೊಡುಗೆ ನೀಡಿತು.
ಭಾರತ ಸರಕಾರ ಕರ್ನಾಟಕ ರಾಜ್ಯದಿಂದ ಈ ವರ್ಷ ಆಯ್ಕೆಗೊಳಿಸಿದ ಏಕೈಕ ಹಜ್ಜ್ ಸೂಪರಿಂಟೆಂಡೆಂಟ್
ಆಗಿರುವ ಕುಪ್ಪೋಡಂಡ ಎ. ರಫೀಕ್ ಅವರು ಭಾನುವಾರದಂದು ಬೆಂಗಳೂರಿನಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಈ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲದೆ, ಕುಪ್ಪೋಡಂಡ ಎ. ರಫೀಕ್ ಅವರು ಇತ್ತೀಚಿಗೆ ಪೊಲೀಸ್ ಇಲಾಖೆಯ ಸಿಐಡಿ ವಿಭಾಗದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ಹೊಂದಿದ ಮತ್ತು 2025ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ಸಾಧನೆಗಾಗಿಯೂ ಕೊಡವ ಮುಸ್ಲಿಂ ಅಸೋಸಿಯೇಷನ್ ನಿಂದ ಇದೇ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಸೂಫಿ ಹಾಜಿ, ಚಿಕ್ಕಂದಿನಿಂದಲೇ ಸಾಧನೆಗೈಯ್ಯುವ ಗುರಿ ಹೊಂದಿದ್ದ ಕುಪ್ಪೋಡಂಡ ಎ. ರಫೀಕ್ ಅವರು, ಕಾಲೇಜು ಶಿಕ್ಷಣ ಮುಗಿಸಿದ ಕೂಡಲೇ ಸೈನ್ಯಕ್ಕೆ ಸೇರಿ ವೃತ್ತಿಪರ ಯಶಸ್ಸನ್ನು ಸಾಧಿಸಿದ್ದಾರೆ. ಬಳಿಕ ಪೊಲೀಸ್ ಇಲಾಖೆಗೆ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಗೊಂಡು ಅಲ್ಪಾವಧಿಯಲ್ಲಿ ಇವರು ಮಾಡಿದ ಸಾಧನೆ ಸಮುದಾಯಕ್ಕೆ ಮಾತ್ರವಲ್ಲ ಇಡೀ ಕೊಡಗು ಜಿಲ್ಲೆಗೆ ಕೀರ್ತಿ ತರುವಂತಾಗಿದೆ. ಅಲ್ಲದೆ, ತೀರಾ ಅಪರೂಪವೆಂಬಂತೆ ಹಜ್ಜ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಲು ಅವಕಾಶ ಪಡೆದ ಇವರು ನಿಜವಾದ ಭಾಗ್ಯಶಾಲಿಗಳು ಎಂದು ಗುಣಗಾನಗೈದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರು ಮತ್ತು ಎಡಪಾಲದ ಹಿರಿಯರಾದ ಕಿಕ್ಕರೆ ಉಮರ್ ಮಾಸ್ಟರ್ ರಫೀಕ್ ಅವರನ್ನು ಅಭಿನಂದಿಸಿ ಇದೇ ಸಂದರ್ಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಎಂಎ ಆಡಳಿತ ಮಂಡಳಿ ನಿರ್ದೇಶಕರುಗಳಾದ ಪೊಯೆಕೆರ ಎಸ್. ರಫೀಕ್, ಆಲೀರ ಅಬ್ದುಲ್ ಲತೀಫ್, ಕಿಕ್ಕರೆ ಮಹಮ್ಮದ್, ಎಡಪಾಲದ ಪ್ರಮುಖರಾದ ಎರಟೆಂಡ ಮೊಹಮ್ಮದ್, ಗ್ರಾ. ಪಂ. ಮಾಜಿ ಸದಸ್ಯರಾದ ಕುಪ್ಪೋಡಂಡ ಮೊಹಮ್ಮದ್, ರಫೀಕ್ ಅವರ ಸಹೋದರರಾದ ಎಡಪಾಲ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಕುಪ್ಪೋಡಂಡ ಬಶೀರ್, ಹ್ಯಾರಿಸ್, ರವೂಫ್ ಮೊದಲಾದವರು ಉಪಸ್ಥಿತರಿದ್ದರು. ಕೆ. ಎಂ. ಎ. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.



