ʼಮುನೀಶ್ವರ ಕ್ರಿಕೆಟ್‌ ಲೀಗ್‌ 2026ʼ ಲೆದರ್‌ ಬಾಲ್‌ ಟೂರ್ನಿ – ಟೀಂ ಸ್ಟ್ರೈಕರ್ಸ್‌ ಚಾಂಪಿಯನ್‌

Share this post :

ಮಡಿಕೇರಿ : ನಗರದ ಮುನೀಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ʼಮುನೀಶ್ವರ ಕ್ರಿಕೆಟ್‌ ಲೀಗ್‌ 2026ʼ ಪ್ರಥಮ ವರ್ಷದ ಲೆದರ್‌ ಬಾಲ್‌ ಟೂರ್ನಮೆಂಟ್‌ ಚಾಂಪಿಯನ್‌ ಆಗಿ ಟೀಂ ಸ್ಟ್ರೈಕರ್ಸ್‌ ಹೊರಹೊಮ್ಮಿದೆ.
ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 08 ದಿನ ಕಾಲ ನಡೆದ ಟೂರ್ನಮೆಂಟ್‌ನಲ್ಲಿ ಜಿಲ್ಲೆಯ ಪ್ರತಿಷ್ಠಿತ 08 ತಂಡಗಳು ಪಾಲ್ಗೊಂಡಿದ್ದವು. ಶನಿವಾರ ಅಪರಾಹ್ನ ನಡೆದ ಫೈನಲ್‌ ಪಂದ್ಯದಲ್ಲಿ ಎಂವೈಸಿಸಿ ಮಡಿಕೇರಿ ತಂಡದ ಎದುರು ಟೀಂ ಸ್ಟ್ರೈಕರ್ಸ್‌ ಸುಲಭ ಜಯ ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ ಎಂವೈಸಿಸಿ 99 ರನ್‌ಗೆ ಆಲೌಟ್‌ ಆಯಿತು. ಗುರಿ ಬೆನ್ನತ್ತಿದ ಸ್ಟ್ರೈಕರ್ಸ್‌ ತಂಡ 14.2 ಓವರ್‌ನಲ್ಲಿ 04 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಜಯಗಳಿಸಿತು.
ಬಹುಮಾನ ಬಹುಮಾನ ವಿತರಣೆ : ಸಂಘದ ಅಧ್ಯಕ್ಷ ಟಿ.ಕೆ. ನಾಗರಾಜ್‌ ಅಧ್ಯಕ್ಷತೆಯಲ್ಲಿ ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು. ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 30 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಯಿತು. ಟೀಂ ಸ್ಟ್ರೈಕರ್ಸ್‌ ತಂಡದ ಶಿವಶಕ್ತಿ ಸರಣಿ ಶ್ರೇಷ್ಠ, ಅತ್ಯುತ್ತಮ ಬ್ಯಾಟರ್‌, ಅಂತಿಮ ಪಂದ್ಯದ ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಎಂವೈಸಿಸಿ ತಂಡದ ರಾಜು ಅತ್ಯುತ್ತಮ ಬೌಲರ್‌, ಸ್ಟ್ರೈಕರ್ಸ್‌ ತಂಡದ ಶರಣ್‌ ಅತ್ಯುತ್ತಮ ಕ್ಷೇತ್ರ ರಕ್ಷಕ, ಕೆಎ12 ಲಯನ್ಸ್‌ ತಂಡ ಜಶ್ವಂತ್‌ ಬೋಪಣ್ಣ ಉದಯೋನ್ಮುಖ ಆಟಗಾರ, ಸ್ಟ್ರೈಕರ್ಸ್‌ ತಂಡದ ಪ್ರಜ್ವಲ್‌ ಉತ್ತಮ ವಿಕೆಟ್‌ ಕೀಪರ್‌ ಪ್ರಶಸ್ತಿ ಗಳಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವೃತ್ತ ನಿರೀಕ್ಷಕ ರಾಜು ಮಾತನಾಡಿ, ಮುನೀಶ್ವರ ಯುವಕ ಸಂಘದ ಸಾಂಘಿಕ ಕಾರ್ಯಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧಾರ್ಮಿಕ ಕಾರ್ಯಕ್ರಮ, ಸಾಮಾಜಿಕ ಚಟುವಟಿಕೆ, ಕ್ರೀಡಾಕೂಟಗಳನ್ನು ಆಯೋಜಿಸಿಕೊಂಡು ಮಾದರಿ ಎನಿಸಿಕೊಂಡಿದೆ ಎಂದರು.
ಕ್ರೀಡಾಕೂಟದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸಮಾಜಸೇವಕ ಹಾಗೂ ಗುತ್ತಿಗೆದಾರ ನೂಜಿಬೈಲು ಜಯ ಹಾಗೂ ಪಂದ್ಯಾವಳಿಯಲ್ಲಿ 330 ಓವರ್‌ ತೀರ್ಪುಗಾರಿಕೆ ಮಾಡಿದ ಎಂ.ಕೆ. ಕಾವೇರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉದ್ಯಮಿ ಪಿ.ಟಿ. ಉಣ್ಣಿಕೃಷ್ಣ, ನಗರಸಭೆ ಸದಸ್ಯೆ ಉಷಾ ಕಾವೇರಪ್ಪ, ಉದ್ಯಮಿ ಶಯನ್‌, ಮುಡಾ ಸದಸ್ಯ ಆರ್‌.ಪಿ. ಚಂದ್ರಶೇಖರ್‌, ವೈದ್ಯ ಡಾ. ಪ್ರಕಾಶ್‌ ಕುಮಾರ್‌, ಉದ್ಯಮಿಗಳಾದ ಧರ್ಮಪಾಲ ಪ್ರಭು, ಸತೀಶ್‌, ಉತ್ತಮ್‌ ಪಿ.ಟಿ. ಮುಂತಾದವರು ವೇದಿಕೆಯಲ್ಲಿದ್ದರು.
ಕಡ್ಲೆರ ಅಂಕಿತಾ ತಂಡವರು ಪ್ರಾರ್ಥಿಸಿದರು. ಲಕ್ಷ್ಯ ಸ್ವಾಗತಿಸಿದರು. ಕಿಶೋರ್‌ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.

coorg buzz
coorg buzz