ವೀರಾಜಪೇಟೆ : ಸಾಮಾಜಿಕ ಜಾಲತಾಣದಲ್ಲಿ ವೀರಾಜಪೇಟೆಯ ನಾಗರೀಕ ಸಮಿತಿಯ ಸಂಚಾಲಕರು, ಸಿಪಿಐ(ಎಂ) ಪಕ್ಷದ ಹಿರಿಯ ಜಿಲ್ಲಾ ಮುಖಂಡರಾದ ಡಾ. ಇ.ರಾ. ದುರ್ಗಾಪ್ರಸಾದ್ ಅವರನ್ನು ತೇಜೋವಧೆ, ವ್ಯಕ್ತಿನಿಂದನೆ ಹಾಹೂ ಅಪಪ್ರಚಾರ ಮಾಡಿ ಅವಮಾನಿಸಿದ್ದಾರೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ. ರಮೇಶ್ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಮೇಶ್, ವೀರಾಜಪೇಟೆಯಲ್ಲಿ ಹಲವಾರು ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ದುರ್ಗಾಪ್ರಸಾದ್ ಒಬ್ಬ ಹುಟ್ಟು ಹೋರಾಟಗಾರ. ಅವರು ಎಂದಿಗೂ ಬಡವರ ಹೊಟ್ಟೆಗೆ ಹೊಡೆದವರಲ್ಲ. ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಾ, ಜನಸಮಾನ್ಯರ, ಕಾರ್ಮಿಕರ ಬದುಕಿಗೆ ದಾರಿ ದೀಪವಾದವರು. ಅವರು ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಾ ಕೂಲಿ ಕಾರ್ಮಿಕರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಂತಹ ವ್ಯಕ್ತಿ. ಇಂತಹ ವ್ಯಕ್ತಿಯ ತೇಜೋವದೆಯನ್ನು ಸಿಪಿಐಎಂ ಖಂಡಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸಂದೇಶವನ್ನು ಹರಿಯಬಿಟ್ಟ ಕಿಡಿಗೇಡಿಯನ್ನು ಕೂಡಲೇ ಪೋಲಿಸರು ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು ಎಂದರು.
ಜಿಲ್ಲಾ ಸಮಿತಿ ಸದಸ್ಯ ಪಿ.ಆರ್. ಭರತ್ ಮಾತನಾಡಿ, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವ ಸಿಪಿಐ(ಎಂ) ಜಿಲ್ಲಾ ಮುಖಂಡರಾದ ಡಾ. ದುರ್ಗಾಪ್ರಸಾದ್ ಅವರು ಸಂಘಟನಾ ನೇತರಾರಾಗಿದ್ದು ತಮ್ಮ ಇಳಿವಯಸ್ಸಿನಲ್ಲೂ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತಾ ಬಂದವರಾಗಿದ್ದಾರೆ. ಅವರು ನಾಗರೀಕ ಸಮಿತಿಯ ಸಂಚಾಲಕರಾಗಿ ವಿರಾಜಪೇಟೆಯ ನಾಗರೀಕರಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ವೇಳೆ ಮಾಲೀಕರಿಗೆ ಕಾನೂನು ರೀತಿಯಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಾ ಬರುತ್ತಿದ್ದಾರೆಯೆ ವಿನಾಃ ತಮ್ಮ ಸ್ವಂತಕ್ಕೆ ಕೇಳುತ್ತಿಲ್ಲ. ಇಂತಹ ಒಬ್ಬ ಸಾಮಾಜಿಕ ಚಿಂತನೆಯ ಹಿರಿಯ ಮುತ್ಸದ್ದಿಯನ್ನು ತೇಜೋವಧೆ ಮಾಡುತ್ತಿರುವುದು ಸರಿಯಲ್ಲ. ಇಂತಹ ದುಷ್ಟಶಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಸಾಮಾಜಿ ಜಾಲತಾಣದಲ್ಲಿ ಸುಳ್ಳು ಸಂದೇಶ ಹರಿಯಬಿಟ್ಟಂತೆ ಅವರ ವಿರುದ್ದ ಆಪಾದನೆಗಳಿದ್ದಲ್ಲಿ ಬಹಿರಂಗ ಚರ್ಚೆಗೆ ಬರಲಿ. ನಾವು ಚರ್ಚೆಗೆ ಸಿದ್ದರಿದ್ದೇವೆ. ಪೋಲೀಸ್ ಇಲಾಖೆ ಕಿಡಿಗೇಡಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಎ.ಸಿ. ಸಾಬು, ಶಾಜಿ ರಮೇಶ್ ಮಾತನಾಡಿ ಪದ್ಮಿನಿ ಶ್ರೀಧರ್ ಇದ್ದರು.



