ಅರಣ್ಯ ಸಚಿವರೇ… ಕಾಡಾನೆ ದಾಳಿಗೆ ಎಷ್ಟು ಜನ ಸತ್ರು ಅಂತ ಎಲ್ಲಿಯವರೆಗೆ ಹಾಕುತ್ತಾ ಇರ್ಬೇಕು..?

Share this post :

ನಾವು ಸತ್ತವರ ಸಂಖ್ಯೆ ಲೆಕ್ಕ ಹಾಕುತ್ತಲೇ ಎಷ್ಟು ದಿನ ಇರಬೇಕು..? ಮೊನ್ನೆ ಒಬ್ಬರು ಹಿರಿಯರು ಮಾತಿಗೆ ಸಿಕ್ಕಾಗ ಕೇಳಿದ ಪ್ರಶ್ನೆ ಇದು. ನನ್ನಲ್ಲೂ ಅವರ ಪ್ರಶ್ನೆಗೆ ಉತ್ತರವಿಲ್ಲದೆ, ಮರು ಪ್ರಶ್ನೆ ಹಾಕುತ್ತಲೇ ಮಾತು ಮುಂದುವರೆಸಿದೆ.
ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾಡಾನೆಗಳ ದಾಳಿ ಇದೇ ಮೊದಲೇನಲ್ಲ. ದಶಕದಿಂದಲೂ ಇದೆ. ಈ ನಡುವೆ ಬಂದ ಹುಲಿರಾಯನ ಬಳಗ ಜಿಲ್ಲೆಯ ಜನರನ್ನು ನಿದ್ದೆಗೆಡಿಸಿತ್ತು. ಇದೀಗ ಅದರ ಜೊತೆಗೆ ಜಗಪಡೆಗಳೂ ಸೇರಿಕೊಂಡಿವೆ. ಹುಲಿ ದಾಳಿಗೆ ಜಾನುವಾರುಗಳು, ಆನೆ ದಾಳಿಗೆ ಮನುಷ್ಯರ ಉಸಿರು ಚೆಲ್ಲುತ್ತಿದ್ದಾರೆ. ಈ ವರ್ಷ ಆರಂಭದಿಂದ ಇಂದಿನವರೆಗೆ(ಈ ಲೇಖನ ಬರೆಯುವ ಸಮಯದವರೆಗೆ) ಕೊಡಗು ಜಿಲ್ಲೆಯಲ್ಲಿ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವರ್ಷದ ಮೊದಲ ದಿನವೇ ಕಾಡಾನೆಯೊಂದು ಬೆಳೆಗಾರರೊಬ್ಬರನ್ನು ತುಳಿದು ಸಾಯಿಸಿತು. ಅದಾದ ನಂತರದಲ್ಲಿ ನಾವು ದಾಳಿ, ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ಎಣಿಸುತ್ತಲೇ ಇದ್ದೇವೆ.
ಈ ವರ್ಷದಲ್ಲಿ ಗಜ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡವರ ಮಾಹಿತಿ ಇಲ್ಲಿದೆ ನೋಡಿ. ಜನವರಿ 01 ಗಣಗೂರಿನಲ್ಲಿ ಪೊನ್ನಪ್ಪ(61), ಜನವರಿ 29ರಂದು ಸಿದ್ದಾಪುರದಲ್ಲಿ ಲತೀಫ್(72)‌, ಫೆಬ್ರವರಿ 28ಕ್ಕೆ ಮದೆನಾಡುವಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜ್ಯ(17), ಮಾರ್ಚ್‌ 09ಕ್ಕೆ ನಂಜರಾಯಪಟ್ಟಣದಲ್ಲಿ ಗ್ರಾಪಂ ಮಾಜಿ ಸದಸ್ಯೆ ಜಲಜಾಕ್ಷಿ(53), ಮಾರ್ಚ್‌ 12 ಸಿದ್ದಾಪುರದಲ್ಲಿ ಚೌರಿರ ಗಣಪತಿ(49).

ಕಾಡಾನೆ-ಮಾನವ ಸಂಘರ್ಷ ವಿಚಾರದಲ್ಲಿ ನಮ್ಮ ಹೋರಾಟ ಅನಾಹುತ ಸಂಭವಿಸಿದಾಗ ಮಾತ್ರ. ಒಂದೋ ಹೆಣವಿಟ್ಟು ಪ್ರತಿಭಟನೆ ಮಾಡೋದು, ಇಲ್ಲ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು, ಇನ್ನೊಂದು ಇಂತಿಷ್ಟು ಲಕ್ಷ ಪರಿಹಾರ ಕೊಡಬೇಕೆಂದು ಆಗ್ರಹಿಸೋದು. ಇದ್ಯಾವುದೂ ತಪ್ಪಲ್ಲ. ಆದರೆ ನಾವು ಇಷ್ಟಕ್ಕೆ ಮಾತ್ರ ಸೀಮಿತವಾಗಿರೋದು ತಪ್ಪು. ಇದಕ್ಕೊಂದು ಅಂತ್ಯ ಕಾಣಿಸುವ ನಿಟ್ಟಿನಲ್ಲಿ, ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಆಡಳಿತ ವ್ಯವಸ್ಥೆಯನ್ನು ಆಗ್ರಹಿಸುವಲ್ಲಿ, ಎಚ್ಚರಿಸುವಲ್ಲಿ ನಾವು ಎಡವುತ್ತಿದ್ದೇವೆ. ಹೋರಾಟದಲ್ಲಿ ಗಟ್ಟಿತನ, ಹಠ ಕಾಣುತ್ತಿಲ್ಲ. ಮೊದಲಿದ್ದ ಜನಧ್ವನಿ, ಒಗ್ಗಟ್ಟು ಈಗ ಕೊಡಗಿನಲ್ಲಿ ಕಾಣಿಸುತ್ತಿಲ್ಲ. ಇದೇ ನಮ್ಮ ವೈಫಲ್ಯ ಎಂಬಂತಾಗಿದೆ. ಎಲ್ಲಾ ಹೋರಾಟವೂ ರಾಜಕೀಯ ಲೇಪನ ಪಡೆದುಕೊಂಡೇ ಆಗುತ್ತಿದೆ. ರಾಜಕೀಯ ಲೇಪ ಇಲ್ಲದೆ ನಡೆಯುವ ಹೋರಾಟಕ್ಕೂ ರಾಜಕೀಯದ ಕೆಸರು ಅಂಟಿಕೊಳ್ಳುತ್ತಲೇ ಅದು ದಿಕ್ಕು ಬದಲಿಸಿಕೊಳ್ಳುತ್ತದೆ.
ಇನ್ನೂ ಸಹಿಸಿಕೊಂಡರೆ, ಮತ್ತದೇ ದಿನಗಳು ಮುಂದುವರೆಯುತ್ತವೆ. ಎಲ್ಲಿ ಆನೆ ಸಂಚರಿಸುತ್ತಿದೆ, ಎಲ್ಲಿ ದಾಳಿಯಾಗಿದೆ, ಎಲ್ಲಿ ಯಾರ ಮೇಲೆ ಆನೆ ದಾಳಿ ಮಾಡಿದೆ, ಯಾರು ಪ್ರಾಣ ಕಳೆದುಕೊಂಡಿದ್ದಾರೆ… ಇದೇ ಲೆಕ್ಕವಿಡುವ ಪ್ರಕ್ರಿಯೆಯನ್ನು ಮುಂದುವರೆಸಬೇಕಷ್ಟೇ.
ಜಿಲ್ಲೆಯ ಎಂಎಲ್‌ಎ, ಎಂಎಲ್‌ಸಿಗಳು ಕಾಡಾನೆ ದಾಳಿ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಕ್ರಮಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಅಲ್ಲಿಗೇ ಅದು ನಿಂತರೆ ನಿಮ್ಮ ಆಗ್ರಹಕ್ಕೆ ಬೆಲೆ ಸಿಗುತ್ತಾ..? ಈ ಹಿಂದೆ ಕೂಡಾ ಶಾಸಕರಾಗಿದ್ದವರು ಅಂದಿನ ಸರ್ಕಾರದಲ್ಲಿ ಇದೇ ರೀತಿಯ ಪ್ರಸ್ತಾಪವನ್ನು ಮಾಡಿದ್ದಾರೆ. ಆದರೆ ಫಲಿತಾಂಶ ಏನು..? ಉತ್ತರ ನಮ್ಮ ಎದುರಲ್ಲೇ ಇದೆ… ಹಾಗಾಗಿ ಶಾಸನ ಸಭೆಯ ಆಗ್ರಹದ ಜೊತೆಗೆ ಅಧಿವೇಶನದ ನಂತರವೂ ಈ ವಿಚಾರದಲ್ಲಿ ಹಠ ಹಿಡಿದು ಸರ್ಕಾರದ ಬೆನ್ನು ಬೀಳುವ ಕೆಲಸ ಮಾಡಬೇಕಿದೆ. ಏಕೆಂದರೆ ಇದು ಜನರ ಜೀವದ, ಜೀವನದ ಪ್ರಶ್ನೆ. ಈಗಲೂ ಕ್ರಮವಾಗದಿದ್ದಲ್ಲಿ ಮುಂದಿನ ಅಧಿವೇಶನದಲ್ಲಿ ಎರಡಂಕಿಯಲ್ಲಿ ಸಾವಿನ ಲೆಕ್ಕ ಹೇಳುವ ಪರಿಸ್ಥಿತಿ ಬರಬಹುದು.

ಅರಣ್ಯ ಸಚಿವರೇ…
ಇದನ್ನು ಓದುತ್ತಿರುವವರ ಗಮನಕ್ಕೆ, ಈಶ್ವರ್‌ ಖಂಡ್ರೆ ಎಂಬವರು ರಾಜ್ಯದಲ್ಲಿನ ಅರಣ್ಯ ಸಚಿವರಾಗಿದ್ದಾರೆ. ಆದರೆ ಆ ಸಚಿವರಿಗೆ ಕೊಡಗಿನಲ್ಲಿ ಅರಣ್ಯ ಇದೆ. ವನ್ಯ ಜೀವಿಗಳಿದ್ದಾವೆ. ಅವುಗಳಿಂದ ಸಮಸ್ಯೆಯಾಗುತ್ತಿದೆ ಎಂಬ ವಿಚಾರ ಗೊತ್ತಿದೆಯೋ, ಇಲ್ಲವೋ ನನಗಂತು ಅರಿಯದು. ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿದೆ. ಇಷ್ಟು ಅವಧಿಯಲ್ಲಿ ಕೊಡಗಿನ ಜನರ ಸಮಸ್ಯೆ ಬಗ್ಗೆ ಅರಿಯಲು ಎಷ್ಟು ಸಮಯ ಕೊಟ್ಟಿದ್ದಾರೆ. ಕಟ್ಟಿಗೆ ಕಡಿದರೆ ಕೇಸ್‌ ಹಾಕುವ ಸೂಚನೆ ಕೊಡುವಲ್ಲಿ ತೋರುವ ಆಸಕ್ತಿಯನ್ನು ವನ್ಯ ಪ್ರಾಣಿಗಳಿಂದ ಪ್ರಾಣ ಕಳೆದುಕೊಳ್ಳುವ ಜನರ ವಿಚಾರದಲ್ಲೂ ಸಚಿವರು ತೋರಬೇಕಿದೆ. ಒಂದು ವೇಳೆ ಅವರಿಗೆ ಇದೆಲ್ಲದರ ಅರಿವಿಲ್ಲದಿದ್ದರೆ, ಅವರ ಪಕ್ಷದಿಂದಲೇ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರು, ಇಲ್ಲಿನ ಮುಖಂಡರುಗಳು ಅವರಿಗೆ ತಿಳಿಸಿ ಜವಾಬ್ದಾರಿ ಪ್ರದರ್ಶಿಸಲು ಆಗ್ರಹಿಸುವ ಇಚ್ಛಾಶಕ್ತಿಯನ್ನು ತೋರುತ್ತಿಲ್ಲವೇಕೆ..? ಕೊಡಗಿನಿಂದ ಸರ್ಕಾರಕ್ಕೆ ಎಲ್ಲವೂ ಬೇಕು. ಆದರೆ ಇಲ್ಲಿನ ಜನರ ಸಮಸ್ಯೆಯನ್ನು ನೀವು ಕೇಳೋದು ಬೇಡ್ವಾ..? ಅದಕ್ಕೆ ನಾವು ಪರಿಹಾರ ಕಂಡುಕೊಳ್ಳೋದು ಬೇಕಿಲ್ವಾ..?

ವಿರೋಧ ಪಕ್ಷಗಳು ಕೂಡಾ ಹೇಳಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಮಾತ್ರ ಸೀಮಿತವಾಗಿದ್ಯಾ ಎಂಬಂತಾಗಿದೆ. ರಾಜಕೀಯವಾಗಿಯೇ ಇದನ್ನು ತೆಗೆದುಕೊಳ್ಳಿ, ಅಡ್ಡಿಯಿಲ್ಲ. ಆದರೆ ಒಂದು ಬಲವಾದ ಧ್ವನಿ ಮೊಳಗಿಸುವ ಕಾರ್ಯ ಆಗಬೇಕಿದೆ. ಕೊಡಗಿನ ಜನ ಇಂಥದ್ದೊಂದು ಗಂಭೀರ ಸಮಸ್ಯೆಯಲ್ಲಿ ಸಿಲುಕಿ ನಲುಗುತ್ತಿದ್ದಾರೆ ಅನ್ನೋದನ್ನ ಆಳುವ ವರ್ಗಕ್ಕೆ ತಲುಪಿಸುವ ಕಾರ್ಯ ಮಾಡಿ. ಶಾಸಕರು ಮಾಡಲಿ, ಅವರು ಅದು ಮಾಡುತ್ತಿಲ್ಲ, ಆಥರ ಮಾಡಬೇಕು, ಈ ಥರ ಮಾಡಬೇಕು ಅಂತೆಲ್ಲ ಹೇಳುವ ಬದಲು, ಇದನ್ನು ಮಾಡಿ ಅಂತ ಬೆಂಗಳೂರಿನಲ್ಲಿ ಕುಳಿತವರಿಗೆ ಮುಟ್ಟಿಸುವ ಕಾರ್ಯವನ್ನು ಮಾಡಿ. ವಿರೋಧ ಪಕ್ಷವಾಗಿ ಇಮಥ ಸಂದರ್ಭದಲ್ಲಾದರೂ ಒಂದು ಸಾಂಘಿಕ ಹೋರಾಟ ರೂಪುಗೊಳ್ಳಲಿ. ಈ ಸಮಸ್ಯೆಯನ್ನು ಎದುರಿಸುತ್ತಿರುವ ಜನ ನಿಮ್ಮೊಂದಿಗೆ ಬರಬಹುದು…
ಸರ್ಕಾರ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಅಂತ ಆಗ್ರಹಿಸುವವರ ಸಂಖ್ಯೆಗೇನು ಕಡಿಮೆಯಿಲ್ಲ. ಆ ವೈಜ್ಞಾನಿಕ ಪರಿಹಾರ ಏನು ಅನ್ನೋದನ್ನು ಸ್ಪಷ್ಟವಾಗಿ ಉಲ್ಲೇಖಿಸಿ. ಯಾವ್ಯಾವ್ದೋ ವಿಚಾರಗಳಿಗೆಲ್ಲ ಸರ್ಕಾರಗಳು ಅಧ್ಯಯನಕ್ಕಾಗಿ ತಂಡವನ್ನು ಫಾರಿನ್‌ ಟೂರ್‌ ಕಳುಹಿಸುತ್ತವೆ. ಇಂಥ ಗಂಭೀರ ವಿಚಾರದಲ್ಲಿ ಒಂದು ಅಧ್ಯಯನ ಆಗ್ಬೇಕು. ಸೂಕ್ತವಾದವನ್ನು ನಾವು ಅನುಷ್ಟಾನ ಮಾಡಬೇಕು ಅಂತ ಎಸಿ ಕೋಣೆಯಲ್ಲಿ ಕುಳಿತ ಮಂದಿಗೆ ಅನ್ನಿಸುವುದೇ ಇಲ್ಲವಾ..?
ರೈಲ್ವೇ ಕಂಬಿ ಯೋಜನೆಗೆ ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತೀರಿ. ಏಕಕಾಲಕ್ಕೆ ಒಂದು ಪ್ರದೇಶ ವ್ಯಾಪ್ತಿಯಲ್ಲಿ ಅಳವಡಿಸಿದರೆ ಅದರಿಂದ ಪ್ರಯೋಜನವಾದೀತು. ಅದು ಬಿಟ್ಟು ಒಂದಷ್ಟು ಮೀಟರ್‌ ಲೆಕ್ಕಾಚಾರದಲ್ಲಿ ಮಾಡುತ್ತಾ ಹೋದರೆ, ನಮಗಿಂತ ಬುದ್ಧಿವಂತ ಆನೆಗಳು ಕಾಡಿನಲ್ಲಿವೆ. ಅವುಗಳಿಗೆ ಬೇಕಾದ ಜಾಗವನ್ನು ಮಾಡಿಕೊಂಡು ನಮ್ಮತ್ತ ಬರುತ್ತವೆ.
ಇನ್ನೊಂದು ವಿಚಾರ… ಈಗ ದಾಳಿ ಮಾಡುತ್ತಿರುವ ಆನೆಗಳು ಕಾಡಿನವಲ್ಲ. ತೋಟದ ಆನೆಗಳು ಅನ್ನುವ ವಾದ ಕೂಡಾ ಇದೆ. ಕಾಡಿನಿಂದ ಬಂದು ಇಲ್ಲಿ ಮರಿಹಾಕಿದ ಬಳಿಕ ಬೆಳೆದ ಆನೆಗಳು. ಇಲ್ಲೇ ಹುಟ್ಟಿ, ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ಆನೆಗಳು ಕಾಡಿಗೆ ಎಷ್ಟೇ ಬಾರಿ ಅಟ್ಟಿದರೂ ಅವುಗಳು ಮರಳಿ ಬರೋದು ತೋಟಗಳ ಕಡೆಗೇ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅವುಗಳನ್ನು ಹಿಡಿದು ಸ್ಥಳಾಂತರ ಮಾಡುವುದಲ್ಲದೆ ಬೇರೆ ಪರಿಹಾರವಿಲ್ಲ.
ನನ್ನೊಂದಿಗೆ ಮಾತಿಗೆ ಸಿಕ್ಕ ಹಿರಿಯರಲ್ಲಿ ಈ ವಿಚಾರವನ್ನೆಲ್ಲಾ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿ ಮಾತನಾಡಿದೆ. ಎಲ್ಲಾ ರಾಜಕೀಯ ಕಣೋ… ಏನ್‌ ಮಾಡೋದು, ಇವ್ರನ್ನ ಕಂಡ್ರೆ ಅವ್ರಿಗೆ ಆಗಲ್ಲ, ಅವ್ರನ್ನ ಕಂಡ್ರೆ ಇವ್ರಿಗೆ ಆಗಲ್ಲ ಅನ್ನುವ ರೀತಿ ಕಚ್ಚಾಡ್ತಾರೆ. ಒಳಗೊಳಗೆ ಎಲ್ಲಾ ಒಂದೇ… ನಾವು ಹೋರಾಟಕ್ಕಿಳಿದ್ರೆ ನಮಗೂ ಲೇಬಲ್‌ ಹಾಕಿ ಬಿಡ್ತಾರೆ… ಕಡೆಗೆ ಆಗೋದೇನು, ಎಷ್ಟು ಜನ ಸತ್ರು ಅಂತ ನಾವು ಲೆಕ್ಕ ಹಾಕೊಂಡಿರ್ಬೇಕಷ್ಟೇ..!

ಲೇಖನ : KRK

coorg buzz
coorg buzz