ಮಡಿಕೇರಿ : ನಾಡಹಬ್ಬ ಮಡಿಕೇರಿ ಜನೋತ್ಸವ ದಸರಾ ಅಂಗವಾಗಿ ಕವಿಗೋಷ್ಠಿ ಗಾಂಧಿ ಮೈದಾನದಲ್ಲಿ ನಡೆಯಿತು. ನಿನ್ನೆ ನಿಧನರಾದ ಕನ್ನಡ ಸಾಹಿತ್ಯ ಲೋಕದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ದಸರಾ ಕವಿಗೋಷ್ಠಿಯನ್ನು ಅರ್ಪಿಸಲಾಯಿತು
ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶ ಹರಪಳ್ಳಿ ರವೀಂದ್ರ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕೆಜಿಎಫ್ ಖ್ಯಾತಿಯ ಚಲನಚಿತ್ರ ಸಾಹಿತಿ ಕಿನ್ನಾಳ ರಾಜ್ ಅವರು ಪಾಲ್ಗೊಂಡಿದ್ದರು. ದಸರಾ ಸಂದರ್ಭದಲ್ಲಿ ಕವಿಗೋಷ್ಠಿ ಹಮ್ಮಿಕೊಂಡು ಸಾಹಿತಿಗಳಿಗೂ ಅವಕಾಶ ಕೊಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕವಿಗೋಷ್ಠಿ ಆರಂಭಕ್ಕೂ ಮುನ್ನ ಗಾಂಧಿ ಮೈದಾನ ರಸ್ತೆಯ ಬಳಿಯಿರುವ ‘ಕುವೆಂಪು ಪುತ್ಥಳಿ’ಗೆ ಪುಷ್ಪ ನಮನದ ಮೂಲಕ ಕವಿಗೋಷ್ಠಿಯ ಅಧ್ಯಕ್ಷೆ ಸಾಹಿತಿ ಸುನೀತಾ ಲೋಕೇಶ್, ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾಧಿಕಾರಿ ಹಾಗೂ ಸಾಹಿತಿ ಕ್ಯಾಪ್ಟನ್ ಬಿದ್ದಂಡ ನಾಣಯ್ಯ, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ, ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಉಪಾಧ್ಯಕ್ಷ ಮಹೇಶ್ ಜೈನಿ ಮತ್ತಿತರರಿದ್ದರು.
ಡಿ.ಹೆಚ್. ಪುಷ್ಪ ಅವರು ರಚಿಸಿರುವ ‘ಸಂವೇದನೆ’ ಕವನ ಸಂಕಲನ ಮತ್ತು ಶೋಭಾ ರಕ್ಷಿತ್ ಅವರ ‘ಮನಸೆಳೆದ ಹಿಮಗಿರಿ’ ಪ್ರವಾಸ ಕಥನ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧೆಡೆಯ 70ಕ್ಕೂ ಅಧಿಕ ಮಂದಿ ವಿವಿಧ ಭಾಷೆಯ ಕವನಗಳನ್ನು ವಾಚಿಸಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳು, ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.