ಶ್ರೇಷ್ಠ ವ್ಯಕ್ತಿಗಳು, ಗ್ರಂಥಗಳ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಬಿ.ಜಿ. ಅನಂತಶಯನ

Share this post :

ವೀರಾಜಪೇಟೆ : ಪ್ರತಿಯೊಬ್ಬ ಮನುಷ್ಯನಲ್ಲೂ ಅಸಾಧಾರಣವಾದ ಶಕ್ತಿ ಇದ್ದು ಅದನ್ನು ಗುರುತಿಸಿಕೊಂಡು ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ನಾವು ಕೂಡ ಶ್ರೇಷ್ಠ ವ್ಯಕ್ತಿಗಳಂತೆ ಬದುಕಬಹುದು ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅಭಿಪ್ರಾಯಪಟ್ಟರು.
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ದಿ .ಕೂತಂಡ ಪಿ. ಉತ್ತಪ್ಪ ಸ್ಮರಣಾರ್ಥ ʼಆಧ್ಯಾತ್ಮಿಕ ನಾಯಕನಾಗಿ ಸ್ವಾಮಿ ವಿವೇಕಾನಂದʼ ಎಂಬ ವಿಷಯದ ಕುರಿತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಮಂಗಳವಾರ ಕಾಲೇಜಿನ ಕೌಸ್ತುಬ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಭಾರತ ದೇಶಕ್ಕೆ ಆಧ್ಯಾತ್ಮವು ಒಂದು ಭದ್ರಬುನಾದಿಯಾಗಿದೆ. ಭಾರತದ ಮೂಲಕ ಇಂದು ಜಗತ್ತಿನಾದ್ಯಂತ ಆಧ್ಯಾತ್ಮಿಕ ವಿಚಾರಗಳು ಪ್ರಚಾರವಾಗಿದೆ. ಈ ರೀತಿಯ ಆಧ್ಯಾತ್ಮಿಕ ವಿಚಾರಗಳನ್ನು ಹೆಚ್ಚು ಪ್ರಚಾರಗೊಳಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಅಗ್ರಗಣ್ಯರು. ತಮ್ಮ ಭಾಷಣ, ಪ್ರವಚನ, ಉಪನ್ಯಾಸಗಳ ಮೂಲಕ ಯುವ ಜನತೆಯನ್ನು ಪ್ರೇರೇಪಿಸುತ್ತಿದ್ದಂತ ಶ್ರೇಷ್ಠ ವ್ಯಕ್ತಿತ್ವ ವಿವೇಕಾನಂದರದು ಎಂದರು.
ವಿವೇಕಾನಂದರ ಕುರಿತ ಪುಸ್ತಕಗಳನ್ನು ಮಾತ್ರ ಓದಿದರೆ ಸಾಲದು ಅವರ ಒಂದೆರಡು ತತ್ವ ವಿಚಾರಗಳನ್ನು ಮೈಗೂಡಿಸುವ ಕೆಲಸ ನಮ್ಮಿಂದಾಗಬೇಕು.‌ ನಾವು ಕೇವಲ ಧರ್ಮ ಗ್ರಂಥ ಪೂಜಿಸಿದರೆ, ಶ್ರೇಷ್ಠ ವ್ಯಕ್ತಿಗಳು ಬರೆದ ಪುಸ್ತಕ ಖರೀದಿಸಿದರೆ ಸಾಲದು ಬದಲಾಗಿ ಅದನ್ನು ಓದಿ ಅರ್ಥೈಸಿಕೊಂಡು ಅದರಲ್ಲಿರುವ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾಗಬೇಕು. ಯುವ ಜನತೆ ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನು ರೂಡಿಸಿಕೊಂಡು ಓದಿದ್ದನ್ನು ಇತರರಿಗೆ ತಿಳಿಸುವಂತಹ ಕಾರ್ಯ ಆದಾಗ ಯುವಜನತೆ ದೇಶದ ಸಂಪತ್ತು ಎಂಬ ಮಾತು ನಿಜವೆನಿಸುತ್ತದೆ. ಸ್ವಾಮಿ ವಿವೇಕಾನಂದ, ಬುದ್ಧರ ಹಾಗೆ ನಮ್ಮೊಳಗಿನ ಜ್ಞಾನವನ್ನು ಅರಿತು ಉತ್ತಮ ಹಾದಿಯಲ್ಲಿ ಸಾಗಿ ಎಲ್ಲಾರು ನನಗೆ, ನಾನು ಎಲ್ಲರಿಗೆ ಎಂಬ ತತ್ವವನ್ನು ಅರಿತರೆ ದೇಶವು ಮುನ್ನಡೆಯುತ್ತದೆ ಎಂದು ಹೇಳಿದರು.
ಕೂತಂಡ ಯು. ಕಾರ್ಯಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದರ ಶ್ರೇಷ್ಠ ವ್ಯಕ್ತಿತ್ವ ಚಿಂತನೆ ಹಾಗೂ ತತ್ವ ವಿಚಾರಗಳನ್ನು ಯುವ ಜನತೆಗೆ ಪರಿಚಯಿಸುವ ಉದ್ದೇಶದಿಂದ ನನ್ನ ತಂದೆಯವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದೀಗ ಅವರ ಮರಣದ ನಂತರವೂ ಈ ಕಾರ್ಯಕ್ರಮವನ್ನು ನಾನು ಮುಂದುವರಿಸುತ್ತೇನೆ. ವಿದ್ಯಾರ್ಥಿಗಳು ಆದಷ್ಟು ತಮ್ಮ ಜೀವನದಲ್ಲಿ ಸದಾ ಕ್ರಿಯಾಶೀಲರಾಗಿದ್ದು, ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವತ್ತ ಗಮನ ಹರಿಸಬೇಕು. ಸ್ವಾಮಿ ವಿವೇಕಾನಂದರ ಜೀವನ, ತತ್ವ ವಿಚಾರ, ಮೌಲ್ಯಗಳನ್ನು ಅರಿತು ಕೆಲವನ್ನಾದರೂ ಮೈಗೂಡಿಸಿಕೊಂಡು ಬಾಳೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಂ .ಎಸ್. ಮುತ್ತಣ್ಣ, ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡು ಹೊಸ ಹೊಸ ವಿಚಾರಗಳನ್ನು ತಿಳಿಯುವುದರೊಂದಿಗೆ ತಮ್ಮ ವ್ಯಕ್ತಿತ್ವ ವಿಕಸನ ಮಾಡಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಜೀವನ, ವ್ಯಕ್ತಿತ್ವ, ಆದರ್ಶ ತತ್ವಗಳನ್ನು ಅರಿತು ಆದಷ್ಟು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಆಲೋಚಿಸಿ ಎಂದರು.

ವೇದಿಕೆ ಕಾರ್ಯಕ್ರಮದ ನಂತರ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಭಾಷಣ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 22 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಆಂಗ್ಲ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಕೆ.ಬಿ. ಮೊಹಮ್ಮದ್ ಅಜ್ನಾಸ್, ದ್ವಿತೀಯ ಸ್ಥಾನ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎಂ.ಜಿ. ಬೆಳ್ಳಿಯಪ್ಪ, ತೃತೀಯ ಸ್ಥಾನವನ್ನು ಪೊನ್ನಂಪೇಟೆ ಸಿ.ಐ.ಟಿ ಕಾಲೇಜಿನ ಪಿ.ಸಿ. ರೇಚಲ್ ನೀಲಮ್ಮ ಪಡೆದುಕೊಂಡರು. ಕನ್ನಡ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ಐ.ಪಿ. ಬಿಂದ್ಯ ಪ್ರಥಮ ಸ್ಥಾನ, ಪೊನ್ನಂಪೇಟೆ ಸಿಐಟಿ ಕಾಲೇಜಿನ ಅದ್ವಿಕ ದ್ವಿತೀಯ ಸ್ಥಾನ, ಕುಶಾಲನಗರ ಅನುಗ್ರಹ ಕಾಲೇಜಿನ ಬಿ.ಎನ್. ದರ್ಶನ್ ತೃತೀಯ ಸ್ಥಾನ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಐನಂಡ ಪಿ. ಗಣಪತಿ ಹಾಗೂ ಅನ್ನಂಬಿರ ಟಿ. ಸುಬ್ರಮಣಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ, ಡಾ.ಕೆ.ಜಿ.ವೀಣಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ಪರ್ಧಾರ್ಥಿಗೊಳು , ಕಾವೇರಿ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರು , ಕಾಲೇಜಿನ ಉಪನ್ಯಾಸಕ ವರ್ಗ , ಆಡಳಿತಾತ್ಮಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

coorg buzz
coorg buzz