ಕ್ರೀಡೆಯು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಂದು ಹಿರಿಯ ಹಾಕಿ ಆಟಗಾರ ಹಾಗೂ ಹಾಕಿ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು . ವಿರಾಜಪೇಟೆ ಕಾವೇರಿ ಕಾಲೇಜು ದೈಹಿಕ ಶಿಕ್ಷಣ ವಿಭಾಗದಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದ್ದ 5 ಎ ಸೈಡ್ ರಿಂಗ್ ಹಾಕಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊಡಗು ಜಿಲ್ಲೆಯು ಹಾಕಿ ತವರೆಂದು ಪ್ರಸಿದ್ಧಿಯನ್ನು ಪಡೆದಿದ್ದು ಹಾಕಿ ಕ್ರೀಡೆಗೆ ಇಲ್ಲಿ ವಿಶೇಷವಾದ ಸ್ಥಾನಮಾನವಿದೆ . ಕ್ರೀಡೆಯೂ ನಮ್ಮಲ್ಲಿ ಸಾಮರಸ್ಯವನ್ನು ಮೂಡಿಸುವುದರೊಂದಿಗೆ ಒಗ್ಗಟ್ಟಿನಿಂದ ಗುರಿಯನ್ನು ಮುಟ್ಟಲು ಸಹಕಾರಿಯಾಗುತ್ತದೆ. ಕಾಲೇಜು ರಾಜ್ಯಮಟ್ಟದ ರಿಂಗ್ ಹಾಕಿ ಪಂದ್ಯಾಟವನ್ನು ಆಯೋಜಿಸುವುದು ಸುಲಭವಾದ ಕೆಲಸವಲ್ಲ. ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವ ಕಾಲೇಜಿನ ಕಾರ್ಯ ಶ್ಲಾಘನೀಯ. ಈ ರೀತಿ ಹೆಚ್ಚು ಹೆಚ್ಚು ಕ್ರೀಡಾಕೂಟಗಳು ಆಯೋಜನೆಗೊಂಡು ಆಟಗಾರರಿಗೆ ಹೆಚ್ಚಿನ ವೇದಿಕೆಗಳು ದೊರೆತಾಗ ಉತ್ತಮ ಕ್ರೀಡಾಪಟುಗಳಾಗಲು ಸಹಕಾರಿಯಾಗುತ್ತದೆ. ಕ್ರೀಡಾಕೂಟವನ್ನು ಆಯೋಜಿಸುತ್ತಿರುವ ಕಾಲೇಜಿಗೂ ದೈಹಿಕ ಶಿಕ್ಷಣ ವಿಭಾಗಕ್ಕೂ ಕ್ರೀಡಾಕೂಟದ ಯಶಸ್ವಿಗೆ ಶ್ರಮಿಸುತ್ತಿರುವ ಎಲ್ಲಾ ಸ್ವಯಂಸೇವಕರಿಗೂ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪುಟ್ಟಿಚಂಡ ಡಯಾನ ಸೋಮಯ್ಯ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಕೊಡಗಿನಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ರಿಂಕ್ ಹಾಕಿ ಪಂದ್ಯಾಟವನ್ನು ಆಯೋಜಿಸಿರುವುದು ಸಂತಸದ ವಿಚಾರ ಕ್ರೀಡಾಪಟುಗಳಿಗೆ ಈ ರೀತಿ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ಆಯೋಜನೆಯಾದಾಗ ತಮ್ಮ ಸಾಮರ್ಥ್ಯ ಪ್ರದರ್ಶಿಸುವುದರೊಂದಿಗೆ ಕ್ರೀಡೆಯ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಸಹಕಾರಿ ಆಗುತ್ತದೆ. ಕ್ರೀಡಾಕೂಟವನ್ನು ಆಯೋಜಿಸಲು ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿ ಇನ್ನು ಈ ರೀತಿಯ ಹೆಚ್ಚು ಕ್ರೀಡಾಕೂಟ ಆಯೋಜಿಸುವಂತಾಗಲಿ ಎಂದು ಹಾರೈಸಿದರು. ವೇದಿಕೆಯ ಮೇಲೆ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ 20 ತಂಡಗಳು ಭಾಗವಹಿಸಿದ್ದು ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗ , ಆಡಳಿತಾತ್ಮಕ ಸಿಬ್ಬಂದಿಗಳು ಹಾಜರಿದ್ದರು.



