ಪ್ರಯತ್ನ ಮತ್ತು ಪರಿಶ್ರಮದಿಂದ ಗುರಿಯನ್ನು ಮುಟ್ಟಬಹುದೇ ಹೊರತು ಅದೃಷ್ಟ, ಹಣೆಬರಹ ನಂಬಿದರೆ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ರುದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜಿನ (Cauvery College) ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಮಂಗಳವಾರ ಕಾಲೇಜಿನ ಕೌಸ್ತುಬ ಸಭಾಭವನದಲ್ಲಿ ಆಯೋಜಿಸಲಾಗಿದ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ಸಮಯ ನಿರ್ವಹಣೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇತಿಹಾಸ ವಿಷಯದ ಮಹತ್ವ ಎಂಬ ವಿಷಯದ ಕುರಿತು ನಡೆದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಬದುಕಿನ ನಿರ್ಮಾಣ ನಮ್ಮ ಕೈಯಲ್ಲಿದ್ದು ನಮ್ಮನ್ನು ನಾವು ಇತರರಿಗೆ ಹೋಲಿಸಿಕೊಳ್ಳುವುದು ನಮಗೆ ನಾವೇ ಮಾಡಿಕೊಳ್ಳುವಂತಹ ಅವಮಾನ. ನಮ್ಮಲ್ಲಿ ಆತ್ಮವಿಶ್ವಾಸವಿರಬೇಕು ಇದು ಸವಾಲನ್ನು ಹೇಗೆ ಎದುರಿಸಬೇಕೆಂದು ಕಲಿಸುತ್ತದೆ ಎಂದರು.
ನಮಗೆ ಸಿಕ್ಕ ಪ್ರತಿಯೊಂದು ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಸೂಕ್ತ ಮಾರ್ಗದಲ್ಲಿ ಬಳಸಿಕೊಂಡು ಸಾಗಿದಾಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ. ವಿದ್ಯಾರ್ಥಿ ಜೀವನದಿಂದ ಸಮಯ ಪ್ರಜ್ಞೆ ಹೆಚ್ಚಿನ ಮಹತ್ವವನ್ನು ನೀಡಬೇಕು. ನಾವು ಸಮಯವನ್ನು ಗೌರವಿಸಿದರೆ ಸಮಯ ನಮಗೆ ಗೌರವವನ್ನು ತಂದು ಕೊಡುತ್ತದೆ .ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವವರಲ್ಲಿ ಮೊದಲು ಮಾನಸಿಕವಾದಂತಹ ಸಿದ್ಧತೆ ಬೇಕು . ನಿರಂತರವಾಗಿ ಓದುವಂತಹ ಪ್ರಕ್ರಿಯೆ ಹಾಗೂ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸೂಕ್ತ ಮಾರ್ಗದರ್ಶನದೊಂದಿಗೆ ಮುನ್ನಡೆದರೆ ಯಶಸಿನ ಕಡೆ ಸಾಗಬಹುದು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲುವ ಸಂದರ್ಭ ಅಧಿ ಸೂಚನೆಗಳನ್ನು ಸಮರ್ಪಕವಾಗಿ ಅರ್ಥೈಸಬೇಕು. ಪಠ್ಯಕ್ರಮಕ್ಕೆ ಅನುಗುಣವಾಗಿ ಸೂಕ್ತ ಪುಸ್ತಕ ಹಾಗೂ ಪರಾಮರ್ಶನ ಗ್ರಂಥಗಳನ್ನು ಆಯ್ಕೆ ಮಾಡಬೇಕು. ಸರಿಯಾದ ಕ್ರಮದಲ್ಲಿ ಓದಿ ಮೂರು ಆರ್ ಸೂತ್ರ ರೀಡ್, ರಿವಿಜನ್ , ರಿಕಾಲ್ ಅಳವಡಿಸಿಕೊಳ್ಳಿ. ಸಾಧ್ಯವಾದಷ್ಟು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಕೆಲಸ ಆದಾಗ ಪರೀಕ್ಷೆಯ ತಯಾರಿ ಸೂಕ್ತವಾಗಿ ಸಾಗುತ್ತದೆ ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹಲವಾರು ಆನ್ ಲೈನ್ ವೆಬ್ಸೈಟ್ ಗಳಿದ್ದು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡಿ ಸಾಮಾಜಿಕ ಮಾಧ್ಯಮದಲ್ಲೇ ಸಮಯ ಹರಣ ಮಾಡುವುದಕ್ಕಿಂತ ಇಂತಹ ವೆಬ್ಸೈಟ್ ಗಳಲ್ಲಿ ಹೆಚ್ಚಿನ ಸಮಯವನ್ನು ಕಳೆದು ಜ್ಞಾನವನ್ನು ಹೆಚ್ಚಿಸಿಕೊಳ್ಳಿ . ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 20 ಪ್ರಶ್ನೆಗಳು ಇತಿಹಾಸ ವಿಷಯದಿಂದ ಇದ್ದು ಅದಷ್ಟು ಉತ್ತಮ ರೀತಿಯಲ್ಲಿ ಅಧ್ಯಯನ ಆರಂಭಿಸಿ ಎಂದರು .
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ಡಾನ ಪ್ರಸ್ತುತ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಬಹಳವಿದೆ. ಒಂದು ಬಾರಿ ಸೋತರೆ ಹತಾಶರಾಗಿ ಹೇಡಿಗಳಾಗ ಹಿಂದೆನಿಲ್ಲಬಾರದು. ಸತತ ಪ್ರಯತ್ನವನ್ನು ಮಾಡುತ್ತಾ ಯಶಸ್ಸಿನ ಕಡೆಗೆ ಸಾಗಬೇಕು . ವಿದ್ಯಾರ್ಥಿ ಜೀವನದಿಂದಲೇ ಜ್ಞಾನವನ್ನು ಗಳಿಸಿಕೊಳ್ಳುವ ಕಡೆಗೆ ವಿದ್ಯಾರ್ಥಿಗಳು ಗಮನವನ್ನು ಹರಿಸುತ್ತಾ ಎಲ್ಲಾ ಒತ್ತಡಗಳನ್ನು ನಿಭಾಯಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ಮಾಡುತ್ತ ಹೋದರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು .
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಐಕ್ಯೂ ಎಸಿ ಸಂಯೋಜಕರಾದ ಎಲ್.ಆರ್. ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾನ ಸಮಿತಿಯ ಮುಖ್ಯಸ್ಥರಾದ ಡಾ. ಕೆ.ಜಿ ವೀಣಾ ಇತಿಹಾಸ ವಿಭಾಗದ ಮುಖ್ಯಸ್ಥರಾದ ಸಿ.ಪಿ. ಅನುಪಮಾ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ. ಕೆ .ಪದ್ಮ , ಇತಿಹಾಸ ವಿಭಾಗದ ಉಪನ್ಯಾಸಕಿ ಚೈತ್ರ , ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.



