ವರದಿ : ರಜಿತ ಕಾರ್ಯಪ್ಪ
ವೀರಾಜಪೇಟೆ : ಕೊಟ್ಟೋಳಿ ಶ್ರೀ ಧಾರಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯೊಂದಿಗೆ ನೆರವೇರಿತು.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಉದ್ಭವ ಲಿಂಗ ಶ್ರೀ ಈಶ್ವರ ದೇವರಿಗೆ ವಿವಿಧ ಪೂಜೆಗಳು ಸಲ್ಲಿಕೆಯಾದವು. ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮೊದಲ ದಿನ ಬೆಳಗ್ಗೆಯಿಂದಲೇ ಗಣಪತಿ ಹೋಮ, ಪ್ರಾರ್ಥನೆ, ಸ್ವಸ್ಥಿ ಪುಣ್ಯವಾಚನ, ಪುಣ್ಯಾಹುತಿ, ದೇವನಾಂದಿ ಮಹಾಗಣಪತಿ ಪೂಜೆ, ಪಂಚಗವ್ಯ ಶುದ್ದಿ, ಋತ್ವಿಕ್ ವರ್ಣನೆ, ಸೇರಿದಂತೆ ರಾತ್ರಿಯವರೆಗೂ ವಿವಿಧ ಪೂಜೆ, ಅನ್ನ ಸಂತರ್ಪಣೆ, ಹೋಮ ಹವನ ನಡೆಯಿತು.
ಸಂಜೆ ಯಾಗ ಶಾಲೆ ಪ್ರವೇಶ, ಕ್ಷೇತ್ರಪಾಲ ಪ್ರಾರ್ಥನೆ, ಕಲಶ ಸ್ಥಾಪನೆ, ವಾಸ್ತು ಹೋಮ, ಆದಿವಾಸ, ಮಹಾಮಂಗಳಾರತಿ, ಗಣಪತಿ ಪೂಜೆ, ಮಂಡಳ ಪೂಜೆ, ರಾಕ್ಷೋಘ್ನ ಹೋಮ, ಆದಿವಾಸಾದಿ ಹೋಮ, ಪೂರ್ಣಾಹುತಿ ನಡೆದು ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಎರಡನೆಯ ದಿನ ಬೆಳಿಗ್ಗೆಯಿಂದ ಮಹಾಗಣಪತಿ ಪೂಜೆ, ತತ್ವ ಹೋಮ, ದೆವರಿಗೆ ಅಷ್ಟಬಂಧ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ಮೂಲ ಮಂತ್ರ ಹೋಮ, ರುದ್ರ ಹೋಮ, ಕಲಾಶಭಿಷೇಕ, ಪುಣ್ಯಾಹವಾಚನ, ಪ್ರತಿಷ್ಠಾಂಗ ಹೋಮ, ಬ್ರಹ್ಮಕಲಶ ಸ್ಥಾಪನೆ, ಕಲಾ ಹೋಮ, ನವಗ್ರಹ ಹೋಮ, ಮಹಾ ಪೂರ್ಣಾಹುತಿ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನಡೆಯಿತು.
ನಂತರ ದೇವರು ಹೊರಗೆ ಬರುವ ಪೂಜೆ, ದೇವರ ನೃತ್ಯ ಬಲಿ ನಡೆದು ಮಹಾಪೂಜೆ ನಡೆಯಿತು. ಬಳಿಕ ಮಹಾ ಪೂಜೆ, ಮಹಾ ಮಂಗಳಾರತಿ ಸೇವೆ ನಡೆಯಿತು. ಇದೇ ಸಂದರ್ಭ ನವಗ್ರಹ ಪ್ರತಿಷ್ಠಾಪನೆ ಪೂಜೆ ನಡೆಯಿತು.
ನೆರೆದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು.
ಪೂಜಾ ವಿಧಿ ವಿಧಾನಗಳನ್ನು ಮುಖ್ಯ ತಂತ್ರಿಗಳಾದ ಜನಾರ್ಧನ್ ಭಟ್ ಅವರ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ನಿತ್ಯ ಅರ್ಚಕರಾದ ವೆಂಕಟೇಶ್ ಭಟ್ ಹಾಗೂ ಇತರರು ನಡೆಸಿದರು. ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂಗಚಂಡ ಚೇತನ್ ಬೆಳ್ಯಪ್ಪ ಹಬ್ಬದ ಕುರಿತು ಮಾತನಾಡಿ, ಈಗಾಗಲೇ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸರ್ವ ಭಕ್ತಾಧಿಗಳ ಸಹಕಾರದಿಂದ ಶ್ರದ್ದಾ ಭಕ್ತಿಯಿಂದ ನಡೆದಿದೆ. ಫೆ.14ರಿಂದ 18ರವರೆಗೆ ಶಿವರಾತ್ರಿ ಹಾಗೂ ದೇವಾಲಯದ ವಾರ್ಷಿಕ ಉತ್ಸವ ನಡೆಯಲಿದೆ. ಇದರ ಅಂಗವಾಗಿ ಫೆ.14ರ ಸಂಜೆ 5 ಗಂಟೆಗೆ ದೇವತಕ್ಕರಾದ ಚಂಗಚಂಡ ಕುಟುಂಬದಿಂದ ಭಂಢಾರವನ್ನು ದೇವಾಲಯಕ್ಕೆ ತರಲಾಗುತ್ತದೆ. ಫೆ.15 ರಂದು ಬೆಳಗ್ಗೆ ಎತ್ತ್ ಪೋರಾಟ್ ಸೇರಿದಂತೆ ವಿವಿಧ ಪೂಜೆ ಪುನಸ್ಕಾರಗಳು ನಡೆಯಲಿದೆ ಎಂದರು.
ಆಡಳಿತ ಮಂಡಳಿಯ ಅಧ್ಯಕ್ಷ ಕೋದಂಡ ಅಜಯ್ ಮುತ್ತಣ್ಣ, ಸಹ ಕಾರ್ಯದರ್ಶಿ ಜಗನ್ನಾಥ್ ಬಬ್ಬಿ, ಚಂಗಚಂಡ ಸಿ ಲಕ್ಷ್ಮಣ್, ಗುಂಬಿರ ಶಾಂತ ಕುಮಾರ್, ಕೋಣೇರಿರ ರಂಜಿ ಕಾವೇರಪ್ಪ, ಚಂಗಚಂಡ ವೇಣು ಮುಂತಾದವರಿದ್ದರು.



