ರಾಜ್ಯ ಅರಣ್ಯ ಸೇವೆಗೆ ಸೇರಿದ 7 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮುಂಬಡ್ತಿ ನೀಡಿ ಕರ್ನಾಟಕ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರನ್ವಯ, ಕೊಡಗು ಜಿಲ್ಲೆಯ ತಿತಿಮತಿ ವಿಭಾಗದಲ್ಲಿ ಎಸಿಎಫ್ (ACF) ಆಗಿ ಕಾರ್ಯನಿರ್ವಹಿಸುತ್ತಿದ್ದ ಕಂಬೆಯಂಡ ಪಿ. ಗೋಪಾಲ್ ರವರನ್ನು ಕೊಡಗು ಜಿಲ್ಲೆಯ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹುದ್ದೆಗೆ ಪದೋನ್ನತಿ ನೀಡಿ ನೇಮಿಸಲಾಗಿದೆ.
ಮೂಲತಃ ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮದವರಾದ ಗೋಪಾಲ್ ಕೆ.ಪಿ ರವರು ಪ್ರಸ್ತುತ ವಿರಾಜಪೇಟೆಯ ನಿವಾಸಿಯಾಗಿದ್ದು, ಈ ಹಿಂದೆ ಸಕಲೇಶಪುರ, ನಾಗರಹೊಳೆ ಮತ್ತು ತಿತಿಮತಿ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೇ ಆದೇಶದಲ್ಲಿ ಕೊಡಗಿನ ಮತ್ತೊಬ್ಬ ಅಧಿಕಾರಿ, ಮಡಿಕೇರಿಯ ಎಸಿಎಫ್ ಆಗಿದ್ದ ವಿ.ಪಿ. ಕಾರ್ಯಪ್ಪ ರವರಿಗೂ ಸಹ ಆನೆ ಕಾರ್ಯಪಡೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ (DCF) ಮುಂಬಡ್ತಿ ನೀಡಲಾಗಿದೆ.



