ಎಡಪಾಲ ಕೌಟುಂಬಿಕ ಕ್ರಿಕೆಟ್ ಕ್ರೀಡಾಕೂಟ-2026: ಕಿಕ್ಕರೆ ಚಾಂಪಿಯನ್

Edapala Family Cricket Tournament-2026

Share this post :

ನರಿಯಂದಡ ಗ್ರಾಮದ ಎಡಪಾಲದ ಕುಪ್ಪೋಡಂಡ ಕುಟುಂಬಸ್ಥರ ಆತಿಥ್ಯದಲ್ಲಿ ನಡೆದ 23ನೇ ವರ್ಷದ ಎಡಪಾಲ ಕೌಟುಂಬಿಕ ಕ್ರೀಡಾಕೂಟ ಇತ್ತೀಚಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಿಕ್ಕರೆ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡು ಸಂಭ್ರಮಿಸಿತು. ಫೈನಲ್ ನಲ್ಲಿ ತೀವ್ರ ಪೈಪೋಟಿ ನೀಡಿದ, ಕ್ರೀಡಾಕೂಟದ ಅತಿಥ್ಯ ವಹಿಸಿದ್ದ ಕುಪ್ಪೋಡಂಡ ತಂಡ ಕೊನೆಗೆ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಎಡಪಾಲ ಗ್ರಾಮದ ಬದ್ರಿಯಾ ಫ್ರೆಂಡ್ಸ್ ತಂಡ ವಿನ್ನರ್ಸ್ ಪ್ರಶಸ್ತಿ ಪಡೆದರೆ, ಕಿಕ್ಕರೆ ತಂಡ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಹಗ್ಗಜಗಾಟ ಸ್ಪರ್ಧೆಯಲ್ಲಿ ಕಿಕ್ಕರೆ ತಂಡ ಪ್ರಥಮ ಸ್ಥಾನ ಗಳಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿ ಮೆರೆಯಿತು. ಈ ಸ್ಪರ್ಧೆಯಲ್ಲಿ ಬದ್ರಿಯಾ ಫ್ರೆಂಡ್ಸ್ ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿತು.

ಎಡಪಾಲದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಈ ಕೌಟುಂಬಿಕ ಕ್ರೀಡಾಕೂಟದಲ್ಲಿ ಎಡಪಾಲ ವ್ಯಾಪ್ತಿಯ ಕುಪ್ಪೋಡಂಡ, ಕಿಕ್ಕರೆ, ಕುರಿಕಡೆ, ಎರಟೇoಡ, ಪೊಯಕಾರಂಡ, ಕೂತಂಬಟ್ಟೀರ, ಕೇಮಾಡ್ ಫ್ರೆಂಡ್ಸ್, ಬದ್ರಿಯಾ ಫ್ರೆಂಡ್ಸ್ ಮತ್ತು ಪಾಟಿಲತ್ ಬ್ರದರ್ಸ್ ಸೇರಿದಂತೆ ಒಟ್ಟು 9 ತಂಡಗಳು ಪಾಲ್ಗೊಂಡಿದ್ದವು.

ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, ಬೆಂಗಳೂರಿನ ರಾಜ್ಯ ಪೊಲೀಸ್ ಅಪರಾಧ ತನಿಖಾ ವಿಭಾಗದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿದ ಎಡಪಾಲದವರಾದ ಕುಪ್ಪಡಂಡ ಎ. ರಫೀಕ್ ಮತ್ತು ಕಳೆದ ಸಿಎ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ತೋರಿದ ಗ್ರಾಮದ ಖಲಂದರ್ ಭಾಷಾ ಅವರನ್ನು ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎಡಪಾಲ ಕೌಟುಂಬಿಕ ಕ್ರೀಡಾಕೂಟದ ಸ್ಥಾಪಕರಾದ ಕುಪ್ಪೋಡಂಡ ಎ. ಅಬ್ದುಲ್ ರಶೀದ್, ಕುಪ್ಪೋಡಂಡ ಕುಟುಂಬ ಸಂಘದ ಅಧ್ಯಕ್ಷರಾದ, ರಾಷ್ಟ್ರಪತಿ ಪದಕ ವಿಜೇತ ನಿವೃತ್ತ ಪೊಲೀಸ್ ಅಧಿಕಾರಿ ಕುಪ್ಪೋಡಂಡ ಎಂ. ಹಂಸ, ಕುಪ್ಪೋಡಂಡ ಕುಟುಂಬದ ತಕ್ಕ ಮುಖ್ಯಸ್ಥರಾದ ಕೆ.ವೈ. ಕುಂಜ್ಹಿಹಮದ್, ಎರಟೇoಡ ಕುಟುಂಬದ ತಕ್ಕ ಮುಖ್ಯಸ್ಥರಾದ ಮೊಯ್ದು ಹಾಜಿ, ಕುರಿಕಡೆ ಕುಟುಂಬದ ತಕ್ಕ ಮುಖ್ಯಸ್ಥರಾದ ಅಹಮದ್ ಹಾಜಿ, ಪೊಯಕಾರಂಡ ಕುಟುಂಬದ ತಕ್ಕ ಮುಖ್ಯಸ್ಥರಾದ ಪಿ. ಎಂ. ಅಬ್ದುಲ್ಲಾ ಸೇರಿದಂತೆ ಎಡಪಾಲದ ವಿವಿಧ ಕುಟುಂಬದ ನೂರಾರು ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕುಪ್ಪೋಡಂಡ ಎ. ಅಬ್ದುಲ್ ರಶೀದ್ ಅವರ ನೇತೃತ್ವದಲ್ಲಿ 2003ರಲ್ಲಿ ಆರಂಭಗೊಂಡ ಎಡಪಾಲದ ಕೌಟುಂಬಿಕ ಕ್ರೀಡಾಕೂಟ ಪ್ರತಿವರ್ಷ ನಡೆಯುತ್ತಿರುವುದು ವಿಶೇಷವಾಗಿದೆ. ಕೊಡಗು ಮುಸ್ಲಿಂ ಕಪ್ ಕ್ರೀಡಾಕೂಟ ಆರಂಭವಾಗುವ ಒಂದು ವರ್ಷ ಮೊದಲೇ ಆರಂಭಗೊಂಡಿರುವ ಎಡಪಾಲ ಕೌಟುಂಬಿಕ ಕ್ರೀಡಾಕೂಟ ಪ್ರಪ್ರಥಮವಾಗಿ ಆರಂಭಗೊಂಡ ಕೌಟುಂಬಿಕ ಕ್ರೀಡಾಕೂಟವಾಗಿದೆ ಎಂಬುದು ಹೆಚ್ಚು ಅಭಿಮಾನದ ಸಂಗತಿಯಾಗಿದೆ.

coorg buzz
coorg buzz