ಭಕ್ತಿ-ಸಂಭ್ರಮದಿಂದ ಜರುಗಿದ ವಾಯತೂರ್ ಆದಿ ಬೈತೂರಪ್ಪ ಊಟು ಮಹೋತ್ಸವ

Share this post :

ವರದಿ : ರಜಿತ ಕಾರ್ಯಪ್ಪ
ವಿರಾಜಪೇಟೆ : ಉಳಿಕ್ಕಲ್ ಶ್ರೀ ವಾಯತೂರ್ ಕಲಿಯಾರ್ ಕೊಡಗಿನ ಶ್ರೀ ಆದಿ ಬೈತೂರಪ್ಪ ದೇವಸ್ಥಾನದ ಊಟು ಮಹೋತ್ಸವ ಜ.೧೩ ರಿಂದ ಪ್ರಾರಂಭವಾಗಿ ಜ.೨೬ ರವರೆಗೆ ೧೪ ದಿನಗಳ ಕಾಲ ಅತ್ಯಂತ ಶ್ರದ್ದಾಭಕ್ತಿಯಿಂದ ನಡೆದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಆರಾಟ್ ಉತ್ಸವ, ಆನೆಯ ಜೊತೆ ಭಕ್ತಿಯಿಂದ ನಡೆಸಲಾಯಿತು. ವಿಶೇಷ ಚಂಡೆಮೇಳದೊಂದಿಗೆ ಆನೆಯ ಮೇಲೆ ಉತ್ಸವ ಮೂರ್ತಿಯ ಮೆರವಣಿಗೆ, ದೇವರ ನೃತ್ಯ ಬಲಿ, ದೇವರ ಮೂಲ ಸ್ಥಾನದ ಬಳಿ ಪೂಜೆ ನಡೆದ ನಂತರ ಕೋಮರತ್ತಚ್ಚನ್ ರಾಜನ್ ನಂಬಿಯಾರ್ ಅವರ ಬಲಿಪೀಠದಿಂದ ವಾಚಲಂ ಸಮಾರಂಭ ನಡೆಯಿತು. ವಟ್ಟಕ್ಕುನ್ನಮ್ ಹರಿಕೃಷ್ಣನ್ ನಂಬೂದಿರಿ ತಿಡಂಬ ನೃತ್ಯವನ್ನು(ಉತ್ಸವ ಮೂರ್ತಿ ಬಲಿ ಪ್ರದರ್ಶನ) ಪ್ರದರ್ಶಿಸಿದರು.
ಉತ್ಸವದ ಕೊನೆಯ ದಿನದಲ್ಲಿ ದೇವಾಲಯದ ಆವರಣವು ಭಕ್ತರಿಂದ ತುಂಬಿತ್ತು. ತಿಡಂಬ ನೃತ್ಯದೊಂದಿಗೆ ಉತ್ಸವವು ಮುಕ್ತಾಯಗೊಂಡಿತು. ಕೊಡಗು ಮತ್ತು ಕೇರಳ ಮಧ್ಯೆ ಬಾಂಧವ್ಯದ ಸಂಕೇತವಾದ ಕಣ್ಣೂರಿನ ಉಳಿಕಲ್ ಗ್ರಾಮದ ಶ್ರೀ ಬೈತೂರಪ್ಪ ದೇವಾಲಯದ ಕೋಮರತಚ್ಚನ್ (ದರ್ಶನ ಪಾತ್ರಿ) ಸಂಪ್ರದಾಯದಂತೆ ಕೊಡಗಿನ ವಿವಿದೆಡೆ ಭೆಟಿ ನೀಡಿ ಆಶೀರ್ವದಿಸಿ ಅಂದಿನಿಂದ ಉತ್ಸವದ ಕೊನೆಯವೆರಗೂ ಪಂಚೆ, ಕೊರಳಲ್ಲಿ ಹೂವಿನ ಹಾರ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಅಡಕೆ ಹಾಳೆಯಿಂದ ಮಾಡಿದ ವಿಶೇಷ ಛತ್ರಿಯ ನೆರಳಿನಲ್ಲಿದ್ದು ದೇವತಾ ಕಾರ್ಯ ನಡೆಸಿಕೊಟ್ಟರು.
ಕೊನೆಯ ಮೂರು ದಿನ ಕೊಡಗಿನವರಿಗೆ ವಿಶೇಷ ಪ್ರಾದಾನ್ಯತೆ ಇದ್ದು ಇಲ್ಲಿ ದೈವ ದರ್ಶನವೂ ನಡೆಯಿತು. ಮೈಮೇಲೆ ದೇವರ ಆವಾಹನೆಯಾಗುವವರು ಮೊದಲು ಇಲ್ಲಿಗೆ ಬರುವ ಪ್ರತೀತಿ ಇದೆ. ಇಲ್ಲಿ ದೈವ ದರ್ಶನ ಆದಮೇಲೆ ಯಾವ ದೈವದರ್ಶನ ಆಗುತ್ತಿರುವುದು ಎನ್ನುವ ಖಾತ್ರಿ ಮಾಡಿಕೊಳ್ಳಲಾಗುತ್ತದೆ.
ಮಲಯಾಳಿಗಳು ಮತ್ತು ಕೊಡಗಿನ ನಿವಾಸಿಗಳು ಆಯೋಜಿಸಿದ್ದ ಹದಿನಾಲ್ಕು ದಿನಗಳ ಊಟು ಉತ್ಸವದಲ್ಲಿ ಈ ಬಾರಿ, ದೇವಾಲಯದಲ್ಲಿ ಕೊಡಗು ನಿವಾಸಿಗಳ ಹೆಚ್ಚಿನ ಭಾಗವಹಿಸುವಿಕೆ ಕಂಡುಬಂದಿತು. ವಾಯತೂರ್ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಉತ್ಸವಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾಧಿಗಳಿಗೆ ಇಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.

coorg buzz
coorg buzz