ವಿರಾಜಪೇಟೆ: ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಸ್ ಡಿ ಎಂ ಸಿ ಸದಸ್ಯರಾದ ವಿನೋದ್ ಟಿ. ಆರ್. ರವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂವಿಧಾನದ ಪ್ರಸ್ತಾವನೆಯ ಪೂರ್ವ ಪೀಠಿಕೆಯ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ ಎನ್ ಎಸ್ ಎಸ್ ಅಧಿಕಾರಿಗಳಾದ ಬಿ. ಎನ್. ಶಾಂತಿಭೂಷಣ್ ಬೋರ್ಕರ್ ರವರು ದಿನದ ಮಹತ್ವದ ಕುರಿತು ಮಾತನಾಡುತ್ತಾ ಭಾರತವು ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನವು ಅತ್ಯಂತ ಶ್ರೇಷ್ಠವಾಗಿದೆ. ಸಂವಿಧಾನವು ಪ್ರಜೆಗಳಿಗೆ ಹಕ್ಕುಗಳನ್ನು ನೀಡಿದ್ದು, ಕಾನೂನಿನ ಪರಿಪಾಲನೆ ಅತೀ ಮುಖ್ಯವಾಗಿದೆ ಎಂದರು. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಬ್ರಾತೃತ್ವ ಗಳು ಸಂವಿಧಾನದ ಪ್ರಮುಖ ಮೂಲಾಂಶಗಳಾಗಿದ್ದು ಸಂವಿಧಾನದ ಮೌಲ್ಯಗಳಿಗೆ ಗೌರವವನ್ನು ಸೂಚಿಸಿ ಸದೃಢ ರಾಷ್ಟ್ರದ ನಿರ್ಮಾಣಕ್ಕೆ ಸರ್ವರೂ ಪಣ ತೊಡಬೇಕು ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕಿ ಕಮಲಮ್ಮ ರವರು ಮಾತನಾಡಿ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಸಾರ್ವಭೌಮದ ಪ್ರತೀಕವಾಗಿದೆ. ಸಮಾನತೆಯ ನೆಲೆಗಟ್ಟನ್ನು ಕಲ್ಪಿಸಿ ಐಕ್ಯತೆಯನ್ನು ಮೂಡಿಸುತ್ತದೆ. ಸಂವಿಧಾನದ ಆಶಯದಂತೆ ಕಾನೂನನ್ನು ಪ್ರತಿಯೊಬ್ಬರು ಗೌರವಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶಾಂತಿ, ಸ್ಥಳೀಯ ಮುಖಂಡರಾದ ವರ್ಗೀಸ್, ಸಹ ಶಿಕ್ಷಕಿ ಕಮರುನ್ನಿಸ, ನಿವೃತ್ತ ಯೋಧರಾದ ಬಿ. ಎಸ್. ಗೋಪಾಲ್ ರಾಜ್, ಸುಮಂತ್, ಎಲಿಯಮ್ಮ, ತಿಲೋತ್ತಮ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ತದನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.



