ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸರ್ವೋದಯ ಸಮಿತಿ ವತಿಯಿಂದ ‘ಹುತಾತ್ಮರ ದಿನಾಚರಣೆ’ಯು ನಗರದಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಯಲ್ಲಿರಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ ‘ಚಿತಾಭಸ್ಮ’ವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಸಮರ್ಪಿಸಲಾಯಿತು.
ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ವಾದ್ಯದೊಂದಿಗೆ ನಗರದ ಮಂಗೇರಿರ ಮುತ್ತಣ್ಣ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮುಖ್ಯ ರಸ್ತೆ ಮೂಲಕ ಗಾಂಧೀಜಿಯವರ ಚಿತಾಭಸ್ಮವನ್ನು ಕೊಂಡೊಯ್ದು ಗಾಂಧಿ ಮಂಟಪ ಬಳಿ ಇರಿಸಿ ಪೊಲೀಸ್ ಗೌರವದೊಂದಿಗೆ ನಮನ ಸಲ್ಲಿಸಲಾಯಿತು. ಬಳಿಕ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗಣ್ಯರು ನೆರವೇರಿಸಿದರು.
ಇದೇ ವೇಳೆ ಪೊಲೀಸ್ ಮೀಸಲು ಪಡೆಯ ಸಬ್ ಇನ್ಸ್‍ಪೆಕ್ಟರ್ ಎಚ್.ಬಿ.ಗಣೇಶ್ ಮತ್ತು ತಂಡದವರು ಮೂರು ಸುತ್ತುಗಳ ಕುಶಾಲತೋಪು ಹಾರಿಸುವ ಮೂಲಕ ರಾಷ್ಟ್ರಪಿತರಿಗೆ ಪೊಲೀಸ್ ಗೌರವಾರ್ಪಣೆ ಸಲ್ಲಿಸಿದರು. ನಂತರ ಮೌನಾಚರಣೆ ನಡೆಯಿತು. ಪೊಲೀಸ್ ವಾದ್ಯ ತಂಡದವರು ರಾಷ್ಟ್ರಗೀತೆ ಹಾಡಿ ಗಮನ ಸೆಳೆದರು.
ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು, ಗಾಂಧೀಜಿಯವರ ಮೆಚ್ಚಿನ ಭಜನಾ ಗಾಯನವನ್ನು ಮೈತಿಲಿ ರಾವ್ ಅವರ ನೇತೃತ್ವದಲ್ಲಿ ಸಂತ ಮೈಕಲರ ಶಾಲೆ ಹಾಗೂ ಕ್ರೆಸೆಂಟ್ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸರ್ವಧರ್ಮ ಗುರುಗಳಿಂದ ಭಗವದ್ಗೀತೆ(ಸಂತೋಷ್ ಭಟ್), ಬೈಬಲ್(ಸಾಗಯ ಮೇರಿ), ಕುರಾನ್(ಇಸಾಕ್ ಅಹ್ಮದ್) ಸಂದೇಶಗಳನ್ನು ಬೋಧಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ ಹುತಾತ್ಮರ ದಿನವು ಬಹಳ ವಿಶೇಷವಾಗಿದೆ. ಮಹಾತ್ಮ ಗಾಂಧೀಜಿ ಅವರು ಸರ್ವರಿಗೂ ಒಳಿತು ಮಾಡಿದ ಸರ್ವೋದಯ ದಿನವಾಗಿದೆ ಎಂದು ತಿಳಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಹಿಂಸೆ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಸರ್ವಜನರ ಸುಖವನ್ನು ಗಾಂಧೀಜಿಯವರು ಬಯಸಿದ್ದರು. ಧರ್ಮ, ನ್ಯಾಯಕ್ಕೆ ಒತ್ತು ನೀಡಿದ್ದರು. ವಿದೇಶಕ್ಕೆ ಹೋದಾಗ ಭಾರತ ಎಂದರೆ ಗಾಂಧೀಜಿಯವರ ನಾಡಿನಿಂದ ಬಂದವರೆಂದು ಗುರುತಿಸುತ್ತಾರೆ. ಇದೊಂದು ರೀತಿ ಅಸ್ಮಿತೆ ಎಂದು ಆರ್.ಐಶ್ವರ್ಯ ಅವರು ನುಡಿದರು.
ಮಹಾತ್ಮ ಗಾಂಧೀಜಿಯವರು ಹಾಕಿಕೊಟ್ಟ ಆದರ್ಶದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂಧುಮಣಿ ಅವರು ಮಾತನಾಡಿ ಪ್ರತಿಯೊಬ್ಬರೂ ಗಾಂಧಿ ಮಾರ್ಗದಲ್ಲಿ ನಡೆಯಬೇಕು ಎಂದರು.
ಸತ್ಯ ಅಹಿಂಸೆ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಆ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಗಾಂಧೀಜಿಯವರ ಆದರ್ಶ ತತ್ವಗಳನ್ನು ತಿಳಿಸಬೇಕು ಎಂದರು.
ಗಾಂಧೀಜಿಯವರ ಆಶಯಗಳು, ಸ್ವಾತಂತ್ರ್ಯಕ್ಕಾಗಿ ನೀಡಿರುವ ಕೊಡುಗೆಗಳು ಮತ್ತಿತರ ಬಗ್ಗೆ ಅಧ್ಯಯನ ಮಾಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂಧುಮಣಿ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು ಎಂದರು.
ಮಹಾತ್ಮ ಗಾಂಧೀಜಿಯವರ ಸಂದೇಶಗಳು, ಆಶಯಗಳು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು. ಆ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳು ಫಸರಿಸಬೇಕು ಎಂದರು.
ಅಹಿಂಸೆ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧೀಜಿಯವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ಬಿಂಧುಮಣಿ ಅವರು ಹೇಳಿದರು.
ಸರ್ವೋದಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸುಮಾರು 68 ವರ್ಷಗಳಿಂದ ಹುತಾತ್ಮರ ದಿನಾಚರಣೆ ಪ್ರಯುಕ್ತ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣವಾದ ನಂತರ ಚಿತಾಭಸ್ಮವನ್ನು ಇಟ್ಟು ಗೌರವಿಸಲಾಗುತ್ತದೆ ಎಂದು ಹೇಳಿದರು.
ಗಾಂಧೀ ಸ್ಮಾರಕ ಉದ್ಯಾನವನ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಟಿ.ಪಿ.ರಮೇಶ್ ಅವರು ತಿಳಿಸಿದರು.
ಈಗಾಗಲೇ ಶಾಸಕರಾದ ಡಾ.ಮಂತರ್ ಗೌಡ ಅವರು 20 ಲಕ್ಷ ರೂ, ಬಿಡುಗಡೆ ಮಾಡಿದ್ದಾರೆ, ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರಿಗೆ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದು ಟಿ.ಪಿ.ರಮೇಶ್ ಅವರು ತಿಳಿಸಿದರು.
ಸರ್ವೋದಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುನಿರ್ ಅಹ್ಮದ್ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಅವರು ‘ನನ್ನ ಜೀವನವೇ ನನ್ನ ಸಂದೇಶ’ವೆಂದು ಹೇಳಿದ್ದಾರೆ ಎಂದರು.
ಶಾಂತಿ, ಏಕತೆ, ಭ್ರಾತೃತ್ವ, ಸಮಾನತೆ, ಇವುಗಳು ಗಾಂಧೀಜಿಯವರ ತತ್ವ ಸಂದೇಶಗಳಾಗಿದ್ದು, ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಜೀವನದಲ್ಲಿ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮಹೇಶ್ ನಾಚಯ್ಯ, ಕೊಡಗು ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿಮ್ಯಾಥ್ಯು, ಸರ್ವೋದಯ ಸಮಿತಿ ಸದಸ್ಯರಾದ ತೆನ್ನಿರಾ ಮೈನಾ, ಚಂದ್ರಶೇಖರ್, ಪ್ರಕಾಶ್ ಆಚಾರ್ಯ, ಕಾನಹಿತ್ಲು ಮೊಣ್ಣಪ್ಪ, ತೋರೇರ ಮುದ್ದಯ್ಯ, ಪ್ರಭು ರೈ, ಅಂಬೆಕಲ್ಲು ನವೀನ್, ಎಸ್.ಪಿ.ವಾಸುದೇವ, ಎಂ.ಎನ್.ಸುಬ್ರಮಣಿ, ಜೆ.ಸಿ.ರಮೇಶ್, ಚುಮ್ಮಿ ದೇವಯ್ಯ, ಮೀನಾಜ್ ಪ್ರವೀಣ್, ಪ್ರೇಮ ಕೃಷ್ಣಪ್ಪ, ಫ್ಯಾನ್ಸಿ, ಜುಲೇಕಾಬಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕರಾದ ದಮಯಂತಿ, ಸ್ಕೌಟ್ಸ್ ಆಯುಕ್ತರಾದ ಜಿಮ್ಮಿ ಸ್ವೀಕ್ವೇರಾ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಪೌರಾಯುಕ್ತರಾದ ಎಚ್.ಆರ್.ರಮೇಶ್, ತಹಶೀಲ್ದಾರ್ ಶ್ರೀಧರ್, ಪೊಲೀಸ್ ಅಧಿಕಾರಿ ರಾಜು, ಪ್ರೇಮ, ಮತ್ತಿತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಮಣಜೂರು ಮಂಜುನಾಥ್ ಇತರರು ಇದ್ದರು.



