ಹೆಗ್ಗಳ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವ

Brahma Kalashabhishekam

Share this post :

ವಿರಾಜಪೇಟೆ : ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶಭಿಷೇಕ ಹಾಗೂ ವಾರ್ಷಿಕ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು. ಜನವರಿ 27, 28 ಹಾಗೂ 29 ರಂದು ಮೂರು ದಿವಸಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಹೋತ್ಸವವು ತೆರೆ ಕಂಡಿತು. ಮೊದಲ ದಿವಸ ಮಹಾಪೂಜೆ, ಪ್ರಸಾದ ಶುದ್ದಿ ಕ್ರಿಯೆಗಳು, ಆಚಾರ್ಯವರಣಂ ಸೇವೆಗಳು ನಡೆದವು. ಎರಡನೆಯ ದಿನದಂದು ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಿಗ್ಗೆ ಮಹಾ ಗಣಪತಿ ಹೋಮ, ಉಷಾ ಪೂಜೆ,ಕಲಶಾಭಿಷೇಕ, ಉಷಾ ಪೂಜೆ, ಬ್ರಹ್ಮ ಕಳಸ ಪೂಜೆ, ಪರಿಕಳಸ ಸೇವೆಗಳನ್ನು ನೆರವೇರಿಸಿ ಧ್ವಜಾರೋಹಣವನ್ನು ಮಾಡಲಾಯಿತು. ಮಧ್ಯಾಹ್ನ ಮಹಾಪೂಜೆಯು ಜರುಗಿತು. ಸಂಜೆ ಆದಿವಾಸ ಹೋಮ, ದೀಪಾರಾಧನೆ, ಕಲಶಾದಿವಸಂ ಸೇವೆಯು ನಡೆಯಿತು. ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಆಡಳಿತ ಮಂಡಳಿಯವರು ತೆರಳಿ ಮಹಾಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಎಡಮಕ್ಕಿ ಸಾರ್ವಜನಿಕ ಮೈದಾನದಿಂದ ತಾಲಪೊಲಿ ಮೆರವಣಿಗೆಯು ನಡೆಯಿತು. ಭಕ್ತಾದಿಗಳು ಹೂವುಗಳನ್ನು ತಟ್ಟೆಗಳಲ್ಲಿ ಹಿಡಿದುಕೊಂಡು ದೀಪಗಳನ್ನು ಬೆಳಗಿಸಿ ಮೆರವಣಿಗೆಯಲ್ಲಿ ಸಾಗಿದರು. ಸಂಜೆ ಮಹಾಪೂಜೆ, ತಾಯಂಭಗಂ ಸೇವೆಯು ಜರುಗಿತು. ತದನಂತರ ಸಭಾ ಕಾರ್ಯಕ್ರಮ ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಹೇಶ್, ಮಹೀ ಕೂರ್ಗ್ ರವರಿಂದ ಆಕರ್ಷಕ ಸಿಡಿ ಮದ್ದಿನ ಪ್ರದರ್ಶನವು ಜರುಗಿತು. ಮೂರನೆಯ ದಿವಸದಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾ ಪೂಜೆ ನಡೆಯಿತು. ತದನಂತರ ಶಾಸ್ತ್ರೋಕ್ತವಾಗಿ ಬ್ರಹ್ಮ ಕಲಶಾಭಿಷೇಕ ಸೇವೆಯನ್ನು ನೆರವೇರಿಸಲಾಯಿತು. ಮಧ್ಯಾಹ್ನ ಮಹಾ ಪೂಜೆಯು ಜರುಗಿತು. ಸಂಜೆ ದೀಪಾರಾಧನೆ, ಮಹಾಪೂಜೆ ತದನಂತರ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಸಹಾಯಾರ್ಥ ದೇಣಿಗೆಯ ಫಲಿತಾಂಶವನ್ನು ಪ್ರಕಟಿಸಲಾಯಿತು. ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ವೇಣುಗೋಪಾಲ್ ಭಟ್ ರವರು ನೆರವೇರಿಸಿದರು.

ಕೇರಳ ರಾಜ್ಯದ ಚಂಡೆ ಬಳಗದವರಿಂದ ಪೂಜಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಚಂಡೆ ಸೇವೆಯು ನಡೆಯಿತು.ಈ ಮೂರು ದಿವಸಗಳ ಕಾಲ ಜರುಗಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಧ್ಯಾಹ್ನ ಹಾಗೂ ಸಂಜೆ ಸಾರ್ವಜನಿಕರಿಗೆ ಅನ್ನ ಸಂತರ್ಪಣ ಸೇವೆಯನ್ನು ನಡೆಸಲಾಯಿತು.ದೇವಸ್ಥಾನವನ್ನು ಮಹೋತ್ಸವದ ಪ್ರಯುಕ್ತ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

coorg buzz
coorg buzz