ನಾಪೋಕ್ಲು: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಜಾಗ ಒತ್ತುವರಿಯಾಗಿರುವ ಬಗ್ಗೆ ,ಒತ್ತುವರಿಯಾಗಿರುವ ಜಾಗವನ್ನು ಉಳಿಸಿಕೊಳ್ಳುವ ಬಗ್ಗೆ ಭಾರತೀಯ ಜನತಾ ಪಕ್ಷವು ಹೋರಾಟ ಮಾಡುತ್ತಿದೆ ಹೊರತು ಶಾಸಕರ ತೇಜೋವಧೆ ಮಾಡುವ ಉದ್ದೇಶಕ್ಕಾಗಿ ಅಲ್ಲ ಎಂದು ಬಿಜೆಪಿ ಪಕ್ಷದ ಪರವಾಗಿ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಕ್ ಶಿವಾಚಾಳಿಯಂಡ ಅಂಬಿ ಕಾರ್ಯಪ್ಪ ಸ್ಪಷ್ಟನೆ ನೀಡಿದ್ದಾರೆ.
ಪಟ್ಟಣದಲ್ಲಿ ಬಿಜೆಪಿ ಪಕ್ಷ ದಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1950 ರ ದಶಕದಲ್ಲಿ ಅಂದಿನ ಹಿರಿಯರ ಮತ್ತು ದಾನಿಗಳ ಪ್ರಯತ್ನದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸ್ಥಳವನ್ನು ದಾನ ನೀಡಿದ್ದು ಅಲ್ಲಿ ಹಲವಾರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದಿದ್ದಾರೆ. 1950ರ ದಶಕದಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀದಾರರು ಶಾಲೆಗಾಗಿ ಜಾಗ ಮಂಜೂರು ಮಾಡಿದ್ದು ಅಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಹಾಗೂ ಅಂಬೇಡ್ಕರ್ ವಸತಿ ಶಾಲೆಗಳು ತಲೆ ಎತ್ತಿವೆ. 1998 ರಲ್ಲಿ ಶಾಲಾ ಮೇಲು ಸ್ತುವಾರಿ ಸಮಿತಿ ಸರ್ವೆ ನಡೆಸಿದ ಸಂದರ್ಭ ಕೆಲವು ಖಾಸಗಿ ವ್ಯಕ್ತಿಗಳು ,ಕಬರ್ ಸ್ಥಾನಗಳು ಒತ್ತುವರಿ ಮಾಡಿಕೊಂಡಿದ್ದು ಕಂಡುಬಂದಿದ್ದು ಆ ಬಳಿಕ ನಿರಂತರವಾಗಿ ಒತ್ತುವರಿ ತೆರವುಗೊಳಿಸುವಂತೆ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ರಾಜ್ಯ ಸರ್ಕಾರದ ಅನುದಾನದಲ್ಲಿ ನವೆಂಬರ್ ತಿಂಗಳಲ್ಲಿ ಶಾದಿ ಮಹಲ್ ಕಟ್ಟಡ ಕಾಮಗಾರಿ ಆರಂಭಗೊಂಡಿದ್ದು ಶಾಸಕರು ಗುದ್ದಲಿ ಪೂಜೆ ನೆರವೇರಿಸಿದ್ದರು. ಸದರಿ ಜಾಗವು ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿದ್ದಾಗಿದೆ ಎಂದು ಮೇಲುಸ್ತುವಾರಿ ಸಮಿತಿ ಶಾಸಕರಿಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಯಾವ ಮನವಿಗಳಿಗೂ ಸ್ಪಂದನೆ ಲಭಿಸದೆ ಇದ್ದದರಿಂದ ಬಿಜೆಪಿಯು ಪತ್ರಿಕ ಹೇಳಿಕೆ ನೀಡಿ ಸಂಬಂಧಿಸಿದವರ ಗಮನ ಸೆಳೆದಿದೆ. ಶಾದಿ ಮಹಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಿಂದಲೂ ಅನುಮತಿ ಪಡೆದಿರುವುದಿಲ್ಲ.
ಸ್ಥಳೀಯ ಕಾಂಗ್ರೆಸ್ ಪದಾಧಿಕಾರಿಗಳು ಕೆಲವರು ಪತ್ರಿಕಾ ಹೇಳಿಕೆ ನೀಡಿ ಶಾಸಕರ ತೇಜೋವಧೆ ಆಗುತ್ತಿದೆ .ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಶಾಲಾ ಸಮಿತಿ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪುರಸ್ಕರಿಸದೆ ಇರುವುದರಿಂದ ಸರ್ವೆಯಲ್ಲಿ ಒತ್ತುವರಿ ಆಗಿರುವ ಬಗ್ಗೆ ಖಚಿತ ಮಾಹಿತಿ ಇರುವುದರಿಂದಲೇ ನಾವು ಹೋರಾಟ ಮಾಡುತ್ತಿದ್ದೇವೆ. ನೀಡಿದ ಮನವಿಗೆ ಕಿಮ್ಮತ್ತು ಬೆಲೆ ನೀಡದ ಕಾರಣ,ಶಾಲೆಯ ಒತ್ತುವರಿ ಜಾಗವನ್ನು ಶಾಲೆಗೆ ಉಳಿಸಿಕೊಳ್ಳುವ ಬಗ್ಗೆ ಹೋರಾಟ ನಡೆಸುತ್ತಿದ್ದೇವೆ ಎಂದರು.
ಕುಂಡಿಯೋಳಂಡ ರಮೇಶ್ ಮುದ್ದಯ್ಯ, ಮಾತನಾಡಿ ಈ ಶಾಲೆಗೆ ಐದು ಕುಟುಂಬಗಳು ಸೇರಿ ಒಟ್ಟು ಸುಮಾರು ಐವತ್ತಾರು ಎಕ್ಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಸರಕಾರದಿಂದ 22 ಎಕ್ಕರೆ ಜಾಗ ಅನುದಾನ ದೊರೆತಿದೆ, ಈ ಜಾಗದಲ್ಲಿ ಒತ್ತುವರಿ ಆಗುತ್ತಿದೆ ಎನ್ನಲಾಗುತ್ತಿದ್ದು ಈ ಅವಧಿಯಲ್ಲಿ ಸಂಪೂರ್ಣ ಸರ್ವೆ ಮಾಡಿ ಸಮಸ್ಯೆಯನ್ನು ಭಗವರಿಸಿ ಕೊಡುವಂತಾಗಬೇಕೆಂದು ನಮ್ಮ ಆಶಯವಾಗಿದೆ ಹೊರತು ಇದರಲ್ಲಿ ರಾಜಕೀಯವಾಗಲಿ ತೇಜೋವಧಯಾಗಲಿ ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ , ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಾಚಾಳಿಯಂಡ ಜಗದೀಶ್ ಓಬಿಸಿ ಹಿಂದುಳಿದ ಮೋರ್ಚಾ ತಾಲೂಕು ಅಧ್ಯಕ್ಷ ಬಿ.ಎಂ.ಪ್ರತೀಪ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಪಾಡಿಯಮ್ಮ0ಡ ಮನು ಮಹೇಶ್ , ಬಿಜೆಪಿ ಪ್ರಮುಖರಾದ ಕೇಟೋಳಿರ ಹರೀಶ್ ಪೂವಯ್ಯ , ಕುಂಡಿಯೋಳಂಡ ವಿಶು ಪೂವಯ್ಯ , ಕನ್ನಂಬಿರ ಸುಧಿ ತಿಮ್ಮಯ್ಯ , ಕಂಗಂಡ ಜಾಲಿ ಪೂವಪ್ಪ , ಆರೆಯಡ ನಂದ ನಂಜಪ್ಪ, ಕುಂಬಾರರ ಅಶೋಕ್ , ಕುಂಡಿಯೋಳಂಡ ಜತ್ತಿ,ಉಪಸ್ಥಿತರಿದ್ದರು.
✍️ ದುಗ್ಗಳ ಸದಾನಂದ



