ಮಡಿಕೇರಿ : ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಕೊಡಗಿನ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಗೌಡ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಎಸ್.ಎಂ ಕೃಷ್ಣ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಮೂವರು ಸಚಿವ ಸಂಪುಟ ಸೇರ್ಪಡೆಯಾಗಿದ್ದರು. ನಂತರ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಪ್ಪಚ್ಚು ರಂಜನ್ ಅವರಿಗೆ ಅಲ್ಪಾವಧಿಗೆ ಸಚಿವ ಸ್ಥಾನ ನೀಡಿದ್ದರು. ನಂತರದಲ್ಲಿ ಬಂದ ಸರ್ಕಾರಗಳು ಕೊಡಗಿನ ಬಗ್ಗೆ ಅಸಡ್ಡೆ ತೋರಿದೆ. ಜಿಲ್ಲೆಯ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸದೇ ಇರುವುದು ಕೊಡಗಿನ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎಂದರು ಸಮಿತಿಯ ಗೌರವ ಸಂಚಾಲಕ ಪಿ.ಎಲ್. ಸುರೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎ.ಎಸ್. ಪೊನ್ನಣ್ಣ ಜನಪ್ರಿಯ ಶಾಸಕರಾಗಿದ್ದು, ಕೊಡಗಿನ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿ ಮೊಳಗಿಸಲಿದ್ದಾರೆ. ಈಗಾಗಲೇ ಸಮಿತಿಯು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಅವರಿಂದಲೂ ಭರವಸೆ ಸಿಕ್ಕಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಪೊನ್ನಣ್ಣ ಅವರೇ ಸೂಕ್ತ ವ್ಯಕ್ತಿ. ಶಾಸಕ ಮಂತರ್ ಗೌಡರಿಗೆ ಸಚಿವ ಸ್ಥಾನ ಕೊಟ್ಟರೂ ಸ್ವಾಗತಾರ್ಹ ಎಂದರು.
ಸಮಿತಿಯ ಪ್ರಧಾನ ಸಂಚಾಲಕ ಪರಮಲೆ ಗಣೇಶ್ ಮಾತನಾಡಿ, ಶಾಸಕ ಪೊನ್ನಣ್ಣ ಕೊಡಗಿನವರೇ ಆಗಿದ್ದು, ಜಿಲ್ಲೆಯ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗುವುದು ಸೂಕ್ತ ಎಂದರು.
ಸಮಿತಿಯ ಸಂಚಾಲಕರಾದ ಪಟ್ಟಡ ದೀಪಕ್, ಪ್ರದೀಪ್ ಕುಮಾರ್, ಕಾಳೇರಮ್ಮನ ಕುಮಾರ್, ಬಾಳಾಡಿ ಪ್ರತಾಪ್ ಸುದ್ದಿಗೋಷ್ಠಿಯಲ್ಲಿದ್ದರು.



