ಮಡಿಕೇರಿ : ಜೀವನದಿ ಕಾವೇರಿ ತೀರ್ಥೋದ್ಭವ ಸಂಭ್ರಮದಲ್ಲಿ ಕೊಡಗು-ಮೈಸೂರು ಸಂಸದ ಯದುವೀರ್ ಪಾಲ್ಗೊಂಡಿದ್ದು. ಅಪರೂಪದ ಕ್ಷಣದಲ್ಲಿ ತಾನು ಭಾಗಿಯಾಗಿದ್ದರ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ನಾಡಿನ ಜೀವನದಿ, ಸಕಲ ಜೀವರಾಶಿಗಳಿಗೂ “ತಾಯಿ” ಸ್ವರೂಪಳಾದ ಕಾವೇರಿ ಮಾತೆಯ ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ಧನ್ಯತಾ ಭಾವ ಮೂಡಿಸಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ಅಪೂರ್ವ ಕ್ಷಣ. ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಬರುತ್ತಿದ್ದಂತೆ ಧಾರ್ಮಿಕ ಭಾವನೆಗಳೂ ಉಕ್ಕುತ್ತವೆ ಎಂದಿದ್ದಾರೆ.
ತೀರ್ಥೋದ್ಭವಕ್ಕೂ ಮುನ್ನ ಭಾಗಮಂಡಲದಿಂದ ತಲಕಾವೇರಿವರೆಗೆ ಪಾದಯಾತ್ರೆಯಲ್ಲಿ ಬಂದಿದ್ದು ನಿಜಕ್ಕೂ ಹೆಮ್ಮೆ ಎನಿಸಿತು. ಇದೊಂದು ಅಪೂರ್ವ ಅವಕಾಶವಾಗಿತ್ತು. ಕಾವೇರಿ ಮಾತೆ ಸಮೃದ್ಧತೆಯಿಂದ ಕೂಡಿದ್ದರೆ ನಾಡು ಸಮೃದ್ಧವಾಗಿರುತ್ತದೆ. ನಾಡಿನಲ್ಲಿ ಶಾಂತಿ, ನೆಮ್ಮದಿ, ಸುಭಿಕ್ಷೆ ತುಂಬಿರಲಿ ಇದೇ ಸಂದರ್ಭದಲ್ಲಿ ಮನಸಾರೆ ಪ್ರಾರ್ಥಿಸಿದ್ದೇನೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.



