ಕೊಡಗಿನ ಗೋಣಿಕೊಪ್ಪದ ಪ್ರತಿಭಾನ್ವಿತ ಯುವಕ ಪಿ.ಇ. ಮನ್ಸೂರ್ ಅವರು ಅಹಮದಾಬಾದ್ನಲ್ಲಿರುವ ಇಸ್ರೋದ ಪ್ರತಿಷ್ಠಿತ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (SAC) ಗೆ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಆಯ್ಕೆಯಾಗುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ. ಗೋಣಿಕೊಪ್ಪದ ಕಾವೇರಿ ಹಿಲ್ಲಸ್ ನಿವಾಸಿ, ನಿವೃತ್ತ ಸೈನಿಕ ಪಿ.ಎಂ. ಇಬ್ರಾಹಿಂ ಹಾಗೂ ದೇವರಪುರ ಸರ್ಕಾರಿ ಶಾಲೆಯ ಶಿಕ್ಷಕಿ ಕೆ.ಇ. ಸಪೂರ ದಂಪತಿಯ ಪುತ್ರರಾದ ಮನ್ಸೂರ್, ಇತ್ತೀಚೆಗೆ ನಡೆದ ಇಸ್ರೋ (ISRO) ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ FASAL 2.0, IPCM ಹಾಗೂ SUFALAM-II ಯೋಜನೆಗಳಿಗೆ ನಿಯೋಜನೆಗೊಂಡಿದ್ದಾರೆ.
ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣ ಮುಗಿಸಿದ ಇವರು, 2025ರಲ್ಲಿ ಮೂಡಬಿದ್ರೆಯ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೃಷಿ ಇಂಜಿನಿಯರಿಂಗ್ ಪದವಿಯನ್ನು 8.9 CGPA ಅಂಕಗಳೊಂದಿಗೆ ಪೂರ್ಣಗೊಳಿಸಿದ್ದರು. ಶೈಕ್ಷಣಿಕವಾಗಿ ಸದಾ ಮುಂದಿದ್ದ ಇವರು ಎಸ್.ಎಸ್.ಎಲ್.ಸಿ ಯಲ್ಲಿ 90.08% ಹಾಗೂ ಪಿಯುಸಿಯಲ್ಲಿ 85.6% ಅಂಕ ಗಳಿಸಿದ್ದರು. ಇದರೊಂದಿಗೆ ನೂರುಲ್ ಹುದಾ ಮದರಸಾದಲ್ಲಿ ಧಾರ್ಮಿಕ ಶಿಕ್ಷಣವನ್ನೂ ಉತ್ತಮ ಶ್ರೇಣಿಯಲ್ಲಿ ಪೂರೈಸಿದ್ದಾರೆ. ಸದ್ಯ ಬೆಂಗಳೂರಿನ ಫರ್ನ್ಸ್ (FERNS) ಎನ್ಜಿಒ ಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ಇಂಟರ್ನ್ಶಿಪ್ ಮಾಡುತ್ತಿರುವ ಇವರು, ಈ ಹಿಂದೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿಯೂ 5 ತಿಂಗಳ ಕಾಲ ತರಬೇತಿ ಪಡೆದಿದ್ದರು.
ಸಂಶೋಧನಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಮನ್ಸೂರ್, ಕೃಷಿ ಭೂಸ್ಥಾನಿಕ ತಂತ್ರಜ್ಞಾನ ಮತ್ತು ಪರಿಸರ ಸ್ಥಿರತೆ ಕುರಿತ ಪ್ರಬಂಧಗಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2024ರ ‘ಸಹ್ಯಾದ್ರಿ ಯಂಗ್ ಇಕಾಲಜಿಸ್ಟ್’ ಪ್ರಶಸ್ತಿ ಹಾಗೂ 2025ರಲ್ಲಿ ಅಡಿಕೆ ಬೆಳೆಯ ಸೂಕ್ತ ನಕ್ಷೆ ತಯಾರಿಕೆಯ ಸಂಶೋಧನೆಗಾಗಿ ‘ಅತ್ಯುತ್ತಮ ಸಂಶೋಧನಾ ಪ್ರಬಂಧ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇವಲ ಓದಿನಲ್ಲಿ ಮಾತ್ರವಲ್ಲದೆ, ಚೆಸ್ ಹಾಗೂ ಫುಟ್ಬಾಲ್ ಕ್ರೀಡೆಗಳಲ್ಲಿಯೂ ರಾಜ್ಯ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಮನ್ಸೂರ್ ಅವರ ಈ ಯಶಸ್ಸಿಗೆ ಅವರ ಕುಟುಂಬದ ಹಿನ್ನೆಲೆಯೂ ಪ್ರೇರಣೆಯಾಗಿದೆ. ತಂದೆ ಇಬ್ರಾಹಿಂ ಅವರು ಸೇನೆಯ ಕೂರ್ಗ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸಿದ್ದರೆ, ತಾಯಿ ಸಪೂರ ಅವರು 2026ರ ಸಾಲಿನ ಉತ್ತಮ ಸರ್ಕಾರಿ ನೌಕರ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇವರ ಅಕ್ಕ ಪಿ.ಇ. ಮೈಮೂನಾ ಅವರು ಕೂಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮನ್ಸೂರ್ ಅವರ ಈ ಮಹೋನ್ನತ ಸಾಧನೆಗೆ ಜಿಲ್ಲೆಯಾದ್ಯಂತ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.



