ಮಡಿಕೇರಿ : ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು, ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ, ಫೀ.ಮಾ.ಕೆ.ಎಂ ಕಾರ್ಯಪ್ಪ ಕಾಲೇಜು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ವಿಶ್ವ ಉಪಶಮನ ಆರೈಕೆ ದಿನಾಚರಣೆ ನಡೆಯಿತು.
ಮಡಿಕೇರಿಯ ಬಾಲಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಡಿಎಚ್‌ಒ ಡಾ. ಸತೀಶ್ ಕುಮಾರ್ ಉದ್ಘಾಟಿಸಿದರು. ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಉಪಶಮನ ಆರೈಕೆಗಾಗಿ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಗಮನ ಹರಿಸಿದೆ. ವೃದ್ಧರಿಗೂ ಪ್ರತ್ಯೇಕ ಹಾಸಿಗೆ ಮೀಸಲಿಡಲು ಕ್ರಮ ವಹಿಸಲಾಗುವುದೆಂದು ಅವರು ಹೇಳಿದರು.
ಈ ಬಾರಿ ‘ಭರವಸೆಯನ್ನು ಸಾಧಿಸುವುದು, ಪ್ಯಾಲಿಯೇಟಿವ್ ಕೇರ್‌ಗೆ ಸಾರ್ವತ್ರಿಕ ಪ್ರವೇಶ’ ಘೋಷ ವಾಕ್ಯದಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವವರ ಮನೆಗೆ ತೆರಳಿ ಆರೈಕೆ ಮಾಡುವ ಜೊತೆಗೆ ಮಾನಸಿಕ ಧೈರ್ಯ ತುಂಬುವುದು ಈ ಯೋಜನೆಯ ಉದ್ದೇಶ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ತಾಯಿ ಮರಣದ ಬಗ್ಗೆ ಮಾಹಿತಿ ನೀಡಿ, ಕೊಡಗಿನಲ್ಲಿ ತಾಯಿ ಮರಣ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 1 ಸಾವು ಸಂಭವಿಸಿತ್ತು. ಶಿಶುಮರಣ ಪ್ರಮಾಣವೂ ಕಡಿಮೆಯಾಗಿದೆ ಎಂದು ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ ರವೀಂದ್ರ ರೈ ಮಾತನಾಡಿ, ಮಡಿಕೇರಿ ವ್ಯಾಪ್ತಿಯಲ್ಲಿ 120 ಮಂದಿಯನ್ನು ಗುರುತಿಸಿ, ಅವರ ಮನೆಗಳಿಗೆ ತೆರಳಿ ಆರೈಕೆ ಮಾಡುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕಾರ್ಯಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಯ್ ಸೂದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಜಿ ವಿಮಲ, ರೋಟರಿ ಮಿಸ್ಟಿಹಿಲ್ಸ್ ಮಡಿಕೇರಿ ಅಧ್ಯಕ್ಷ ರತ್ನಾಕರ ರೈ, ಫೀ.ಮಾ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇ.ಡಾ.ರಾಘವ್, ಹಿರಿಯ ವೈದ್ಯಾಧಿಕಾರಿ ಡಾ.ವಿಭಾ ಎಸ್.ಪಿ, ಆರೈಕೆದಾರರ ಪ್ರತಿನಿಧಿ ಜೂರಾ ಮುಂತಾದವರಿದ್ದರು.



