ಮಡಿಕೇರಿ: ಮಡಿಕೇರಿ ನಗರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಕೊಡಗಿನ ಹಿರಿಯ ಕಲಾವಿದರಾದ ಲಿಯಾಕತ್ ಅಲಿ (69) ಅವರು ಇಂದು ಬೆಳಿಗ್ಗೆ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗದೆ, ಸಾಂಸ್ಕೃತಿಕ ಲೋಕದಲ್ಲೂ ಗುರುತಿಸಿಕೊಂಡಿದ್ದರು. ಗಾಯಕರಾಗಿದ್ದ ಇವರು ಕಲೆ ಮತ್ತು ಸಾಹಿತ್ಯದ ಮೇಲೆ ಅಪಾರ ಅಭಿಮಾನ ಹೊಂದಿದ್ದರು. ವಿಶೇಷವಾಗಿ ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಲಿಯಾಕತ್ ಅಲಿ ಅವರು, ಐತಿಹಾಸಿಕ ‘ಗೋಕಾಕ್ ಚಳುವಳಿ’ಯೂ ಸೇರಿದಂತೆ ಜಿಲ್ಲೆಯ ಹಲವು ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಜಿಲ್ಲೆಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.



