ವಿರಾಜಪೇಟೆ : ಪ್ರತಿಯೊಬ್ಬರೂ ಕೂಡ ಪ್ರಕೃತಿಯ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರಬೇಕು ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯರವರು ಅಭಿಪ್ರಾಯಪಟ್ಟರು. ಅವರು ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ನೇಚರ್ ಕ್ಲಬ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಕೃತಿಯು ಮಾನವನಿಗೆ ಒಂದು ವರವಾಗಿದ್ದು ಭಾವನಾತ್ಮಕವಾಗಿಯೂ, ಆರೋಗ್ಯದ ದೃಷ್ಟಿಯಿಂದಲೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಪರಿಸರ ಅಧ್ಯಯನವನ್ನು ನಾವು ಪ್ರಾಯೋಗಿಕವಾಗಿ ಅಧ್ಯಯನ ಮಾಡಬೇಕು. ಪರಿಸರದಲ್ಲಿ ನಾವು ಕಲಿಯುವ ಪಾಠವು ಆರೋಗ್ಯವನ್ನು ಉತ್ತಮಪಡಿಸುವುದಲ್ಲದೆ ಸುಂದರ ಸಮಾಜದ ಸೃಷ್ಟಿಗೂ ಕಾರಣವಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮೌಲ್ಯಯುತವಾದ ಶಿಕ್ಷಣವನ್ನು ಪಡೆಯಿರಿ ಎಂದು ಕಿವಿಮಾತು ಹೇಳಿದರು. ಸತ್ಯ, ಪ್ರಾಮಾಣಿಕತೆ, ನ್ಯಾಯಪರವಾದ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಉಪನ್ಯಾಸವನ್ನು ನೀಡಿದ ಪತ್ರಕರ್ತರು ಹಾಗೂ ಬರಹಗಾರರಾದ ಉಷಾ ಪ್ರೀತಂ ರವರು ಮಾತನಾಡುತ್ತ ಕೊಡಗು ಪ್ರಕೃತಿ ಸೌಂದರ್ಯದ ನಾಡು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮಲ್ಲಿ ಆಗಮಿಸುತ್ತಾರೆ. ನಮ್ಮಲ್ಲಿರುವಂತಹ ಸಸ್ಯ ಪ್ರಭೇದ, ಜೀವ ಜಂತುಗಳು ನಮ್ಮ ನಾಡನ್ನು ಶ್ರೀಮಂತ ಗೊಳಿಸಿವೆ. ಹಳೆಯ ಕಾಲದಲ್ಲಿ ಇದ್ದಂತಹ ಕೃಷಿ ಪದ್ಧತಿಗಳು, ಅರಣ್ಯ ಸಂಪತ್ತು ಕ್ಷೀಣಿಸಿವೆ. ಭತ್ತದ ಗದ್ದೆಗಳು ಇಂದು ವಾಣಿಜ್ಯೀಕರಣ ಆಗುತ್ತಿದೆ. ಹಚ್ಚ ಹಸಿರಾಗಿದ್ದ ಪರಿಸರ ಲೇಔಟ್ ಆಗಿ ಪರಿವರ್ತನೆಯಾಗಿದೆ. ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಆರಂಭಿಸಿವೆ. ಪರಿಸರ ನಾಶದಿಂದ ಮನುಷ್ಯನು ಪ್ರಾಣಿಗಳ ಜೊತೆ ಸಂಘರ್ಷ ಮಾಡುವ ಹಂತಕ್ಕೆ ನಾವಿಂದು ತಲುಪಿದ್ದೇವೆ. ನೈಸರ್ಗಿಕ ಸಂಪನ್ಮೂಲಗಳು ಬರಿದಾಗಲು ನಾವೇ ಕಾರಣವಾಗುತ್ತಿದ್ದೇವೆ.
ಸ್ವಚ್ಛ ಪರಿಸರ ನಿರ್ಮಾಣಕ್ಕೆ ಎಲ್ಲರೂ ಪಣತೊಡಬೇಕಾಗಿದೆ. ನಮ್ಮ ಪ್ರಕೃತಿ ನಮ್ಮ ಪರಿಸರ ಎಂಬ ಭಾವನೆ ಎಲ್ಲರಲ್ಲೂ ಬರಬೇಕಾಗಿದೆ. ಅವಾಗ ಮಾತ್ರ ಸ್ವಚ್ಛಂದ ಆರೋಗ್ಯಯುಕ್ತ ಪರಿಸರ ನಿರ್ಮಾಣ ಸಾಧ್ಯ ಎಂದರು. ಪದವಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕಿ ಹೇಮ ರವರು ಮಾತನಾಡಿ ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆಗೆ ಮುಂದಾಗಬೇಕು. ನಮ್ಮ ಬಾಲ್ಯದಲ್ಲಿ ಇದ್ದಂತಹ ಪರಿಸರ ಇಂದು ಇಲ್ಲವಾಗಿದೆ. ಮಾಲಿನ್ಯ ಮುಕ್ತ ಪರಿಸರವನ್ನು ನಿರ್ಮಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ರವರು ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ನಾವು ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದೇವೆ. ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದೇವೆ. ಆದರೆ ನಮ್ಮ ಜೀವನಕ್ಕೆ ಮುಖ್ಯವಾದ ಪರಿಸರವನ್ನು ಸಂರಕ್ಷಿಸುವಲ್ಲಿ ವಿಫಲವಾಗಿದ್ದೇವೆ. ತಂತ್ರಜ್ಞಾನ ಎಷ್ಟೇ ಮುಂದುವರೆದರು ಪ್ರಕೃತಿಯನ್ನು ಉಳಿಸದಿದ್ದಲ್ಲಿ ಮಾನವನು ಜೀವಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ನೇಚರ್ ಕ್ಲಬ್ ಘಟಕದ ಸಂಚಾಲಕಿ ಸೌಮ್ಯ ರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ನೇಚರ್ ಕ್ಲಬ್ ಘಟಕದ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿ ನಿಶಿ ಸ್ವಾಗತಿಸಿ, ನಿರೂಪಿಸಿದರು.



