ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ – ಭಕ್ತರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಿ ಅಂತ ಹೇಳಿದ್ಯಾರು..?

Share this post :

ಮಡಿಕೇರಿ : ಅಕ್ಟೋಬರ್ ೧೭ ರಂದು ತಲಕಾವೇರಿಯಲ್ಲಿ ಜರುಗುವ ಪವಿತ್ರ ಕಾವೇರಿ ತೀರ್ಥೋದ್ಭವ ಸಂಬಂಧ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸೂಚಿಸಿದ್ದಾರೆ.
ಭಾಗಮಂಡಲ ‘ಶ್ರೀ ಭಗಂಡೇಶ್ವರ ದೇವಾಲಯದ ಹಳೆ ಮುಡಿಶೆಡ್ ಕಟ್ಟಡದ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಲಕಾವೇರಿಯಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿ ಕಿರಿಕಿರಿ ಉಂಟಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ೧೭ ರಂದು ಮಧ್ಯಾಹ್ನ ೧.೪೪ ಗಂಟೆಗೆ ಸಲ್ಲುವ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಸಂಭವಿಸುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದ್ದು, ಆದ್ದರಿಂದ ಅಗತ್ಯ ಕ್ರಮವಹಿಸುವಂತೆ ಸಚಿವರು ಸೂಚಿಸಿದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಈ ಬಾರಿ ಪವಿತ್ರ ತೀರ್ಥೋದ್ಭವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ಭಾಗಮಂಡಲ-ತಲಕಾವೇರಿ, ತಲಕಾವೇರಿ-ಭಾಗಮಂಡಲ ಮಾರ್ಗದಲ್ಲಿ ೨೫ ಕ್ಕೂ ಹೆಚ್ಚು ಬಸ್ಸು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಈ ಮಾರ್ಗದಲ್ಲಿ ಪ್ರಯಾಣಿಕರಿಗೆ ತೀರ್ಥೋದ್ಭವದಂದು ಉಚಿತ ಪ್ರಯಾಣಕ್ಕೆ ಅವಕಾಶ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿದ್ದಾಟಂಡ ಎಸ್.ತಮ್ಮಯ್ಯ ಅವರು ತಲಕಾವೇರಿಯ ವಾಹನ ನಿಲುಗಡೆ ಸ್ಥಳದಲ್ಲಿ ಜಾಗ ಖಾಲಿ ಇದ್ದರೂ ‘ಮಿಸ್ ಗೈಡ್’ ಮಾಡುತ್ತಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು. ಈ ಬಾರಿ ಮಧ್ಯಾಹ್ನ ವೇಳೆಯಲ್ಲಿ ತೀರ್ಥೋದ್ಭವ ಸಂಭವಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದು, ತೀರ್ಥೋದ್ಧವದ ಮುಂಚಿತವಾಗಿ ೨ ಗಂಟೆಯೊಳಗೆ ಭಕ್ತಾಧಿಗಳು ತೆರಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಲಕಾವೇರಿಗೆ ಇಷ್ಟು ಗಂಟೆಯೊಳಗೆ ತೆರಳಬೇಕು ಎಂದು ಸಮಯ ನಿಗಧಿ ಮಾಡಲು ಸಾಧ್ಯವಿಲ್ಲ. ತೀರ್ಥ ತೆಗೆದುಕೊಂಡು ಹೋಗುವ ಮತ್ತು ಬರುವ ವಾಹನಗಳಿಗೆ ಮಾತ್ರ ವಾಹನ ಪಾಸ್ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರಾದ ಈರಸಪ್ಪ ಅವರು ಕಳೆದ ಬಾರಿ ೧೫ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು, ಈ ಬಾರಿ ಹೆಚ್ಚಿನ ಬಸ್ಸು ಕಲ್ಪಿಸಲಾಗುವುದು ಎಂದರು.
ಕಾವೇರಿ ನೀರಾವರಿ ನಿಗಮದ ಇಇ ಪುಟ್ಟಸ್ವಾಮಿ ಅವರು ಮಾತನಾಡಿ ಹೂಳು ತೆಗೆಯುವುದು ಸೇರಿದಂತೆ ಮೇಲ್ಸುತುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ತ್ರಿವೇಣಿ ಸಂಗಮದಲ್ಲಿ ಬೇಸಿಗೆ ಅವಧಿಯಲ್ಲಿ ನೀರು ಕಡಿಮೆಯಾಗುತ್ತದೆ. ಆದ್ದರಿಂದ ಚೆಕ್‌ಡ್ಯಾಂ ನಿರ್ಮಾಣ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಕೋರಿದರು.
ಸೆಸ್ಕ್ ಇಇ ರಾಮಚಂದ್ರ ಅವರು ಮಾತನಾಡಿ ಪವಿತ್ರ ತೀರ್ಥೋದ್ಭವಕ್ಕೆ ಸೆಸ್ಕ್ ವಿಭಾಗದಿಂದ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಸೂರ್ತಲೆ ಸೋಮಣ್ಣ, ಗಣಿ ಪ್ರಸಾದ್, ಕುದುಕುಳಿ ಭರತ್ ಅವರು ಮಡಿಕೇರಿ ಭಾಗಮಂಡಲ ರಸ್ತೆ ತ್ವರಿತವಾಗಿ ಗುಂಡಿ ಮುಚ್ಚುವ ಕಾರ್ಯ ಆಗಬೇಕು ಎಂದು ಮನವಿ ಮಾಡಿದರು.
ಸ್ಥಳೀಯರೊಬ್ಬರು ಅಕ್ಟೋಬರ್, ೧೭ ಮತ್ತು ೧೮ ರಂದು ೨ ದಿನಗಳ ಕಾಲ ಭಾಗಮಂಡಲ ಮತ್ತು ತಲಕಾವೇರಿ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಇದಕ್ಕೆ ಶಾಸಕರು ಸಮ್ಮತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೇಕಲ್ ರಾಮನಾಥ್ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ಗುಣಮಟ್ಟದ ರಸ್ತೆಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
‘ಈ ಸಂದರ್ಭದಲ್ಲಿ ಮಾತನಾಡಿದ ಹೊಸೂರು ಸತೀಶ್ ಕುಮಾರ್ ಅವರು ಮಡಿಕೇರಿ-ಭಾಗಮಂಡಲ ಮಾರ್ಗವನ್ನು ದ್ವಿಪಥ ರಸ್ತೆ ನಿರ್ಮಾಣ ಮಾಡಬೇಕು ಎಂದು ಸಲಹೆ ಮಾಡಿದರು.’
ಪ್ರಮುಖರಾದ ನೆರವಂಡ ಉಮೇಶ್ ಅವರು ಮಾತನಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಆಗಮಿಸಿರುವುದಿಲ್ಲ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಪವಿತ್ರ ತೀರ್ಥೋದ್ಭಕ್ಕೆ ಅಗತ್ಯ ವೈದ್ಯರು ಮತ್ತು ಶುಶ್ರೂಷಕರ ನಿಯೋಜನೆ, ಆಂಬ್ಯುಲೆನ್ಸ್ ಸೇವೆ ಹಾಗೂ ವೀಲ್‌ಚೇರ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಕಾಡೆಮಿಗಳಿಂದ ಸುಗಮ ಸಂಗೀತ ಹಾಗೂ ಕಾವೇರಿ ಮಾತೆ ಕುರಿತು ಭಕ್ತಿ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವಂತೆ ಸೂಚಿಸಿದರು.
ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಅಬಕಾರಿ ಅಧಿಕಾರಿಯವರು ಮಾಹಿತಿ ನೀಡಿ ಸ್ಥಳೀಯ ಗ್ರಾ.ಪಂ.ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗುತ್ತದೆ ಎಂದು ಹೇಳಿದರು.
‘ಈ ಕುರಿತು ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಅಕ್ಟೋಬರ್, ೧೭ ರಂದು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗುವುದು ಎಂದು ಹೇಳಿದರು.’
ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವನ್ನು ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಆ ನಿಟ್ಟಿನಲ್ಲಿ ಒಂದು ದಿನದ ಮಟ್ಟಿಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಸ್ಥಳೀಯರೊಬ್ಬರು ೨ ದಿನದ ಮಟ್ಟಿಗೆ ಜಿಲ್ಲೆಯಾದ್ಯಂತ ಮದ್ಯ, ಮೀನು ಮತ್ತು ಮಾಂಸ ಮಾರಾಟ ನಿಷೇಧ ಮಾಡುವಂತಾಗಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಗ್ರಾ.ಪಂ.ಸದಸ್ಯರಾದ ಹೊಸೂರು ಸತೀಶ್ ಕುಮಾರ್ ಅವರು ಭಾಗಮಂಡಲ ಗ್ರಾ.ಪಂ. ವತಿಯಿಂದ ಸ್ವಚ್ಛತೆಗೆ ಒತ್ತು ನೀಡಲಾಗುವುದು. ಆ ನಿಟ್ಟಿನಲ್ಲಿ ಪ್ರತ್ಯೇಕ ಅನುದಾನ ನೀಡಬೇಕು ಎಂದು ಕೋರಿದರು.
ಸ್ಥಳೀಯರೊಬ್ಬರು ಮಾತನಾಡಿ ಹಿಂದೆ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಅವಕಾಶ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹಿಂದೆ ನಡೆದುಕೊಂಡು ಬಂದಿರುವುದನ್ನು ಬದಲಿಸಲು ಸಾಧ್ಯವಿಲ್ಲ. ಹಿಂದೆ ಆಗಿರುವುದಕ್ಕೆ ನಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.
ತಲಕಾವೇರಿಯ ಅರ್ಚಕರು ಮಾತನಾಡಿ ತಲಕಾವೇರಿಯಲ್ಲಿ ಚಳಿ, ಗಾಳಿ ಮಳೆಯ ನಡುವೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಶೆಲ್ಟರ್ ನಿರ್ಮಾಣ ಹಾಗೂ ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಇದಕ್ಕೆ ಧ್ವನಿಗೂಡಿಸಿದ ಬಿ.ಎಸ್.ತಮ್ಮಯ್ಯ ಅವರು ಅರ್ಚಕರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಈ ಕುರಿತು ಮಾತನಾಡಿದ ಕೋಡಿ ಮೋಟಯ್ಯ ಅವರು ಅರ್ಚಕರ ವಾಸ್ತವ್ಯ ಹಾಗೂ ವಿಶ್ರಾಂತಿಗೆ ಅವಕಾಶ ಮಾಡಬೇಕು ಎಂದರು.
ಸ್ಥಳೀಯರಾದ ಕೀರ್ತಿಕುಮಾರ್ ಅವರು ಮಾತನಾಡಿ ಭಾಗಮಂಡಲ-ತಲಕಾವೇರಿಯಲ್ಲಿ ಬಿಎಸ್‌ಎನ್‌ಎಲ್ ದೂರವಾಣಿ ನೆಟ್‌ವರ್ಕ್ ಸಮಸ್ಯೆ ಇದ್ದು, ಇದರ ನಿರ್ವಹಣೆ ಆಗಬೇಕು ಎಂದು ಕೋರಿದರು.
ಪ್ರಮುಖರಾದ ಎಂ.ಬಿ.ದೇವಯ್ಯ ಅವರು ತಲಕಾವೇರಿಯಲ್ಲಿನ ದೇವಾಲಯದ ಬಗ್ಗೆ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎ.ಎಸ್.ಪೊನ್ನಣ್ಣ ಅವರು ನವೆಂಬರ್ ತಿಂಗಳಲ್ಲಿ ಸಭೆ ಆಹ್ವಾನಿಸಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಟಿ.ಎಂ.ಧರ್ಮಜ ಉತ್ತಪ್ಪ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಗ್ರಾ.ಪಂ.ಉಪಾಧ್ಯಕ್ಷರಾದ ಗಂಗಮ್ಮ,, ಉಪ ವಿಭಾಗಾಧಿಕಾರಿ ನಿತಿನ್, ಬಳ್ಳಡ್ಕ ಅಪ್ಪಾಜಿ, ತಹಶೀಲ್ದಾರ್ ಶ್ರೀಧರ, ತಾ.ಪಂ.ಇಒ ಶೇಖರ್, ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯದ ಇಒ ಚಂದ್ರಶೇಖರ್ ಇತರರು ಇದ್ದರು.

 

coorg buzz
coorg buzz