ಪುರುಷ ಸಾಹಿತಿಗಳಿಗೆ ಮೀಸಲಿಟ್ಟಿರುವ ಪ್ರಪ್ರಥಮ ಹಾಗೂ ಪ್ರತಿಷ್ಠಿತ ದತ್ತಿ “ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ”ಗೆ ಜಿಲ್ಲೆಯ ಹಿರಿಯ ಸಾಹಿತಿ ನಾಗೇಶ್ ಕಾಲೂರು (Nagesh kaloor) ರವರು ರಚಿಸಿದ “ಶ್ರೀ ಕಾವೇರಿ ದರ್ಶನಂ – ಸಮಗ್ರ ಕಾವೇರಿ ಚರಿತೆ” ಕೃತಿಯು ಪುರಸ್ಕೃತ ಗೊಂಡಿದೆ. ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್ ಗೋಪಾಲಕೃಷ್ಣ ರವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ಮೊದಲ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಬರಹಗಾರರ ಕೃತಿಗಳನ್ನು ಆಹ್ವಾನಿಸಿದಾಗ ಹತ್ತು ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಸ್ತುತಪಡಿಸಿದ್ದರು.
ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಈ ಪುಸ್ತಕಗಳನ್ನು ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಹತ್ತು ಜನ ಲೇಖಕರಲ್ಲಿ ಅತಿ ಹೆಚ್ಚು ಅಂಕ ಪಡೆದ “ಶ್ರೀ ಕಾವೇರಿ ದರ್ಶನಂ -ಸಮಗ್ರ ಕಾವೇರಿ ಚರಿತೆ” ಕೃತಿಯ ಲೇಖಕರಾದ ನಾಗೇಶ್ ಕಾಲೂರು ರವರು ಪಡೆದುಕೊಂಡಿದ್ದಾರೆ ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಐ ಮುನೀರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.