ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಸಹಯೋಗದಲ್ಲಿ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಮೆದುಳು ದಿನಾಚರಣೆ ನಡೆಯಿತು.
2025 ನೇ ಸಾಲಿಗೆ ‘ಎಲ್ಲಾ ವಯಸ್ಸಿನವರಿಗೂ ಮೆದುಳಿನ ಆರೋಗ್ಯ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಕೊಡಗು ಜಿಲ್ಲೆಯ ಮೆದುಳು ಆರೋಗ್ಯ ಕಾರ್ಯಕ್ರಮದ ಅಧಿಕಾರಿಗಳಾದ ಡಾ.ಆನಂದ್ ಅವರು ಮತ್ತು ವೇದಿಕೆಯಲ್ಲಿನ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶ್ವ ಮೆದುಳು ದಿನವನ್ನು ಆಚರಿಸಿ ಮೆದುಳಿನ ಆರೋಗ್ಯದ ಜವಾಬ್ದಾರಿಯನ್ನು ನೆನಪಿಸಿ, ಎಲ್ಲ ಸರ್ಕಾರಿ ಸಂಸ್ಥೆಗಳು ಆರೋಗ್ಯ ವೃತ್ತಿಪರರು, ಆರೈಕೆದಾರರು, ನಾಗರಿಕರು ಎಲ್ಲರೂ ಸೇರಿ ಜಾಗೃತಿ ಮೂಡಿಸಿ ಕಾರ್ಯಕ್ರಮವನ್ನು ಬೆಂಬಲಿಸುವಲ್ಲಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ದಿನವಾಗಿದೆ ಎಂದು ತಿಳಿಸಿದರು.
ಮೆದುಳು ದೇಹದ ಅತ್ಯಂತ ಪ್ರಮುಖ ಅಂಗವಾಗಿದೆ. ದೈಹಿಕ ಚಲನೆಗಳಿಂದ ಹಿಡಿದು ಆಲೋಚನೆಗಳು ಭಾವನೆಗಳು ಮತ್ತು ಸ್ಮರಣೆಯವರೆಗೆ ಎಲ್ಲವನ್ನು ನಿಯಂತ್ರಿಸುವ ಅಂಗವಾಗಿದೆ. ಮೆದುಳು ಸರಿಯಾಗಿ ಕೆಲಸ ನಿರ್ವಹಿಸದಿದ್ದಲ್ಲಿ ಮನುಷ್ಯರು ಪರಾವಲಂಬಿಯಾಗಿ ಬೇರೆಯವರಿಗೆ ಹೊರೆಯಾಗಬೇಕಾಗುತ್ತದೆ. ನರರೋಗ ಸಂಬಂಧಿಸಿದ ಸಮಸ್ಯೆಗಳು ಜಾಸ್ತಿ ಆಗುತ್ತಿರುವುದನ್ನು ಗಮನಿಸಿ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ತಲೆನೋವು, ಪಾಶ್ರ್ವವಾಯು, ಮೂರ್ಛೆರೋಗ, ಪಾರ್ಕಿನ್ ಸನ್ ಕಾಯಿಲೆ ಮತ್ತು ಮರೆವಿನ ಕಾಯಿಲೆಗಳು ಕಂಡುಬಂದಲ್ಲಿ ತಕ್ಷಣ ವೈದ್ಯರಿಗೆ ತೋರಿಸಿ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಲು ಸಲಹೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಮೆದುಳು ಆರೋಗ್ಯ ಕಾರ್ಯಕ್ರಮದಡಿಯಲ್ಲಿ 2024 ರಿಂದ ಜೂನ್ 2025 ನೇ ಸಾಲಿನವರೆಗೂ 3000 ಫಲಾನುಭವಿಗಳು ಮೆದುಳು ಆರೋಗ್ಯ ಚಿಕಿತ್ಸಾಲಯದಲ್ಲಿ ಉಚಿತ ಚಿಕಿತ್ಸೆ ಪಡೆದಿರುತ್ತಾರೆ. ಮೆದುಳನ್ನು ಆರೋಗ್ಯವಾಗಿಡಲು ಸರಳ ದೈನಂದಿನ ಅಭ್ಯಾಸಗಳು ಸಹ ಬಹಳ ಮುಖ್ಯ. ಆರೋಗ್ಯಕರ ಜೀವನ ಶೈಲಿ ಆಯ್ಕೆಗಳು ಮತ್ತು ಮನಸ್ಥಿತಿಗಳು ಬಹಳ ಮುಖ್ಯ. ಕನಿಷ್ಠ ಏಳರಿಂದ ಎಂಟು ಗಂಟೆವರೆಗೆ ನಿದ್ರೆಗೆ ಆದ್ಯತೆ ನೀಡುವುದು. ಮಾನಸಿಕವಾಗಿ ಸಕ್ರಿಯರಾಗಲು ಓದುವುದು ಮತ್ತು ಒತ್ತಡವನ್ನು ನಿಯಂತ್ರಿಸುವುದು. ಧೂಮಪಾನವನ್ನು ತಪ್ಪಿಸಿ ಮತ್ತು ಮಧ್ಯವನ್ನು ಮಿತಿಗೊಳಿಸಿ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ, ಶುಶ್ರೂಷಕ ಅಧೀಕ್ಷಕರಾದ ವೀಣಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಮೆದುಳು ಆರೋಗ್ಯ ಕಾರ್ಯಕ್ರಮದ ತಂಡದ ವಿಕ್ರಂ, ಕಾವ್ಯಶ್ರೀ, ಪ್ರಿರ್ದೋಸ್ ಸುಲ್ತಾನ ಹಾಗೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು, ಇಲಾಖೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.