ಕೊಡವ ಭಾಷಿಕರ ಅಸ್ಮಿತೆ ಉಳಿಸಿ ಬೆಳೆಸುವಲ್ಲಿ ಶ್ರಮಿಸಿ: ಅಜ್ಜಿನಿಕಂಡ ಮಹೇಶ್ ನಾಚಯ್ಯ

Share this post :

ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಕೊಡವ ಭಾಷಿಕರು ಜಾತಿಯಲ್ಲಿ ಕೊಡವ ಎಂದು, ಉಪ ಜಾತಿಯಲ್ಲಿ 21 ಸಮಾಜಗಳು ತಮ್ಮ ತಮ್ಮ ಉಪಜಾತಿ, ಧರ್ಮದಲ್ಲಿ ‘ಕೊಡವ’ ಎಂದು ನಮೂದಿಸುವಂತಾಗಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಕರೆ ನೀಡಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮೂರ್ನಾಡು ಕೊಡವ ಸಮಾಜ ಇವರ ಸಹಯೋಗದಲ್ಲಿ ಮೂರ್ನಾಡು ಕೊಡವ ಸಮಾಜದಲ್ಲಿ ಗುರುವಾರ ನಡೆದ ‘ಕೊಡವಾಮೆರ ಬಟ್ಟೆ-ಬೊಳಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಸ್ಕøತಿಯು ಧರ್ಮದ ಮೂಲ ಬೇರಾಗಿದೆ. ಧರ್ಮ ಮತ್ತು ಸಂಸ್ಕøತಿಯನ್ನು ಬೇರೆ ಬೇರೆಯಾಗಿ ವಿಂಗಡಿಸಲು ಅಸಾಧ್ಯ. ಆ ದಿಸೆಯಲ್ಲಿ ಕೊಡವ ಧರ್ಮ ಎಂದು ನಮೂದಿಸುವಂತಾಗಬೇಕು ಎಂದು ಪ್ರತಿಪಾದಿಸಿದರು.

ಕೊಡವ ಭಾಷಿಕರ ಅಸ್ಮಿತೆಯನ್ನು ಉಳಿಸುವಲ್ಲಿ ಕೊಡವ ಭಾಷಿಕರು ಮುಂದಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವಂತೆ ಮನವಿ ಮಾಡಿದರು.
ಕೊಡವ ಭಾಷಿಕರಲ್ಲಿ 21 ಸಮಾಜಗಳು ಇದ್ದು, ಎಲ್ಲರೂ ಒಟ್ಟುಗೂಡಿ ಕೊಡವ ಸಂಸ್ಕøತಿ, ಸಾಹಿತ್ಯ, ಪರಂಪರೆ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಹಿಂದಿನ ಕಾಲದಿಂದಲೂ ಕಾಡನ್ನು ರಕ್ಷಿಸಿಕೊಂಡು ಎಲ್ಲಾ ದೇವಾನುದೇವತೆಗಳನ್ನು ಕಾಡಿನಲ್ಲಿ ಪೂಜಿಸಿಕೊಂಡು ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿನ ಕೊಡವ ಭಾಷಿಕ ಅಸ್ಮಿತೆಯನ್ನು ಉಳಿಸಿಕೊಂಡು ಹೋದರೆ ಮಾತ್ರ ಕೊಡವಾಮೆಯ ಉಳಿವಿಗೆ ಸಾಧ್ಯ. ಕೊಡವಾಮೆ ಉಳಿಯಲಿ, ಕೊಡವ ಧರ್ಮ ಬೆಳೆಯಲಿ ಎಂದು ಅವರು ಒತ್ತಿ ಹೇಳಿದರು.

ಕೊಡವರಲ್ಲಿ ಸುಮಾರು 1147 ಮನೆತನವಿದ್ದು, ಕೊಡವ ಭಾಷಿಕರು ಸೇರಿದಂತೆ ಒಟ್ಟು 2 ಸಾವಿರಕ್ಕೂ ಹೆಚ್ಚು ಮನೆತನಗಳಿವೆ. ಎಲ್ಲರೂ ಒಟ್ಟುಗೂಡಿ ಕೊಡವ ಸಂಸ್ಕøತಿ, ಸಾಹಿತ್ಯ, ಕಲೆ, ಉಡುಗೆ ತೊಡುಗೆ ಭಾಷೆಯನ್ನು ಉಳಿಸಬೇಕು ಎಂದರು.

ಕೊಡವಾಮೆರ ಬಟ್ಟೆ ಬೊಳಿ ಎಂದರೆ ಬಂದಂತಹ ಹಾದಿಯನ್ನು ಮರೆಯದೆ, ನಶಿಸಿ ಹೋಗುತ್ತಿರುವುದನ್ನು ಬೆಳಕಿನೆಡೆಗೆ ನಡೆಸಿಕೊಂಡು ಹೋಗುವಂತಾಗಬೇಕು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮಹೇಶ್ ನಾಚಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಯೂಕೋ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಮಾತನಾಡಿ ಕೊಡವ ಭಾಷೆಗೆ ಅದರದೆ ಆದ ಪ್ರಾಮುಖ್ಯತೆ ಇದೆ. ಕೊಡವ ಭಾಷೆಗೆ ತನ್ನದೇ ಆದ ಇತಿಹಾಸವಿದ್ದು, 1838 ರ ನಂತರ ರಾಬರ್ಟ್ ಎಂಬವರು 18 ವರ್ಷಗಳ ಕಾಲ ಭಾಷೆಯ ಬಗ್ಗೆ ಅಧ್ಯಯನ ಮಾಡಿ ಕೊಡವ ಭಾಷೆ ಸೇರಿದಂತೆ ಇತರೆ ಭಾಷೆಗಳಲ್ಲೂ ಪುಸ್ತಕ ಪ್ರಕಟಿಸಿದ್ದಾರೆ ಎಂದರು.

ಕೊಡವ ಭಾಷೆ ದ್ರಾವಿಡ ಭಾಷೆಯಲ್ಲಿ ಅತ್ಯಂತ ಹಳೆಯದಾಗಿದೆ. ಆ ದಿಸೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಭಾಷೆಗೆ ಸಂಬಂಧಿಸಿದಂತೆ ಹಲವು ಉಪಯುಕ್ತ ಪುಸ್ತಕಗಳನ್ನು ಭಾಷಾಂತರ ಮಾಡಬೇಕು ಎಂದು ಮಂಜು ಚಿಣ್ಣಪ್ಪ ಅವರು ಕೋರಿದರು.

ಕೊಡವ ಭಾಷಿಕರ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕು. ಸಾಮಾಜಿಕ ಶೈಕ್ಷಣಿಕ ಗಣತಿ ಸಂದರ್ಭದಲ್ಲಿ ಎಚ್ಚರವಹಿಸಿ ಧರ್ಮ, ಜಾತಿ, ಉಪಜಾತಿ ಬರೆಸಬೇಕು. ಕೊಡವಾಮೆ ಎಂದರೆ ಇಲ್ಲಿನ ಮಣ್ಣು, ಭಾಷೆ, ಸಂಸ್ಕøತಿ.. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.

ವಿಚಾರ ಮಂಡಿಸಿದ ಪಾಲೆಂಗಡ ಅಮಿತ್ ಭೀಮಯ್ಯ ಅವರು ಮಾತನಾಡಿ ‘ಕರಿಮರತ್ತ್ ಬೋಜ’ ಈ ಮರವನ್ನು ಬೆಳಕಿರದಂತಹ ಜಾಗದಲ್ಲಿ ಬೆಳೆಯಲಾಗುತ್ತದೆ. ಈ ಮರವು 20 ರಿಂದ 28 ಮೀಟರ್ ಉದ್ದ ಬೆಳೆಯುತ್ತದೆ. ಇದರ ಬೀಜವನ್ನು ಚರ್ಮ ರೋಗಕ್ಕೆ ಬಳಸಲಾಗುತ್ತದೆ ಎಂದರು.
ಇದಕ್ಕೆ ಕೊಡಗಿನಲ್ಲಿ ಉತ್ತಮ ಸ್ಥಾನವಿದ್ದು, ಈ ಮರಕ್ಕೆ ಸಿಡಿಲು ಬಡಿಯುವುದಿಲ್ಲ. ಯಾವುದೇ ನಕರಾತ್ಮಕ ಶಕ್ತಿ, ಜೊತೆಗೆ ಕ್ರಿಮಿಕೀಟಗಳು ಮುಟ್ಟುವುದಿಲ್ಲ. ಇದಕ್ಕೆ ಕೊಡವರು ದೇವರ ಸ್ಥಾನವನ್ನು ನೀಡಿ ಪೂಜಿಸುತ್ತಾರೆ. ಕರಿಮರದ ಗಿಡವನ್ನು ನಾವು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸುವಂತಾಗಬೇಕು ಎಂದು ಹೇಳಿದರು.

ಅಕಾಡೆಮಿ ಸದಸ್ಯರಾದ ಕೊಂಡಿಜಮ್ಮನ ಬಾಲಕೃಷ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸಕ್ತ ಆಡಳಿತ ಮಂಡಳಿಯಿಂದ 12 ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.

ನೆರವಂಡ ಅನೂಪ್ ಉತ್ತಯ್ಯ ಹಾಗೂ ಅವರೆಮಾದಂಡ ಸುಗು ಸುಬ್ಬಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪುದಿಯೊಕ್ಕಡ ಕಾಶಿ ಕರುಂಬಯ್ಯ, ಗೌರಮ್ಮ ಮಾದಮ್ಮಯ್ಯ, ಪಳಂಗಂಡ ಮೇದಪ್ಪ, ಪೊನ್ನಚ್ಚಿರ ಎಸ್.ಮನೋಜ್, ಮಡೆಯಂಡ ಪೊನ್ನಪ್ಪ, ಪಳಂಗಡ ರೇಖಾ, ಅಕಾಡೆಮಿ ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ನಾಯಂದಿರ ಆರ್.ಶಿವಾಜಿ, ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಪೊನ್ನಿರ ಗಗನ್, ಕುಡಿಯರ ಕಾವೇರಪ್ಪ, ಚೆಪ್ಪುಡಿರ ಉತ್ತಪ್ಪ, ನಾಪಂಡ ಸಿ.ಗಣೇಶ್, ನಾಯಕಂಡ ಬೇಬಿ ಚಿಣ್ಣಪ್ಪ ಇತರರು ಇದ್ದರು.

ಮೂರ್ನಾಡು ಕೊಡವ ಸಮಾಜದ ಭೂಮಿಕಾ, ರಮ್ಯ, ಕೌಶಿ ಪ್ರಾರ್ಥಿಸಿದರು. ಪೊಮ್ಮಕ್ಕಡ ಕೂಟದವರು ಸ್ವಾಗತ ನೃತ್ಯ ಪ್ರದರ್ಶಿಸಿದರು. ಹಾಗೆಯೇ ಚೆಯ್ಯಂಡ ಬನಿತ್ ಬೋಜಣ್ಣ ನಿರೂಪಿಸಿದರು, ಚೆಂಗಂಡ ಸೂರಜ್ ತಮ್ಮಯ್ಯ ಸ್ವಾಗತಿಸಿದರು. ಬಾಲಕೃಷ್ಣ ವಂದಿಸಿದರು.

coorg buzz
coorg buzz