ಮುಂಬೈ : ಜೆಮಿಮಾ ರೋಡ್ರಿಗಸ್ ಅವರ ಸಮಯೋಚಿತ ಶತಕದ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾವನ್ನು ಸೆಮಿಫೈನಲ್‌ನಲ್ಲಿ ಮಣಿಸುವ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶಿಸಿದೆ.
ಮುಂಬೈನ ಡಿ.ವೈ. ಪಾಟೀಲ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಭಾರತದ ವನಿತೆಯರು 05 ವಿಕೆಟ್‌ನಿಂದ ಮಣಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ 338 ರನ್‌ಗೆ ಆಲೌಟ್ ಆಗಿತ್ತು. 339 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಪ್ರತೀಕಾ ರಾವಲ್ ಗಾಯಗೊಂಡ ಪರಿಣಾಮ ಅವಕಾಶ ಪಡೆದಿದ್ದ ಶಫಾಲಿ ವರ್ಮಾ 10 ರನ್ ಗಳಿಸಿ ಔಟಾದರು. ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಸ್ಮೃತಿ ಮಂದಾನ 24 ರನ್‌ಗೆ ಅನುಮಾನಾಸ್ಪದ ತೀರ್ಪಿಗೆ ಔಟಾಗಿ ಮರಳಬೇಕಾಯಿತು.
ನಂತರ ಜೊತೆಯಾದ ಜೆಮಿಮಾ ರೋಡ್ರಿಗ್ಸ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಉತ್ತಮ ಜೊತೆಯಾಟವಾಡಿದರು. ಕೌರ್ 89 ರನ್ ಗಳಿಸಿ ಔಟಾದರು. ದೀಪ್ತಿ ಶರ್ಮಾ, ರಿಚಾ ಘೋಶ್ ಬಿರುಸಿನ ರನ್ ಗಳಿಸಿ ಅಮೂಲ್ಯ ಕೊಡುಗೆ ನೀಡಿದರು. 48.3 ಓವರ್‌ನಲ್ಲಿ ಭಾರತ ತಂಡ ಗುರಿ ಮುಟ್ಟಿ ಹಾಲಿ ಚಾಂಪಿಯನ್ನರನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಜೆಮಿಮಾ ಕೊನೆಯವರೆಗೆ ಆಡಿ 127 ರನ್ ಗಳಿಸಿ ನಾಟೌಟ್ ಆಗಿ ಉಳಿದರು.
ಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನ.02ರಂದು ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಮಯ ಮ.03 ಗಂಟೆಯಿಂದ.



