ನಾಳೆ‌(ಸೆ. 28) ಮಡಿಕೇರಿಯಲ್ಲಿ ರಂಗೇರಲಿದೆ ಮಹಿಳೆಯರ ಸಂಭ್ರಮ

Share this post :

ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಮಂಜಿನ ನಗರಿ ಮಡಿಕೇರಿಯಲ್ಲಿ 8ನೇ ವರ್ಷದ ಮಹಿಳಾ ದಸರಾ ಏರ್ಪಡಿಸಲಾಗಿದ್ದು ತಾ. 28ರ ಭಾನುವಾರದಂದು ನಡೆಯಲಿದೆ.

ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಬೆಳಿಗ್ಗೆ  9.30  ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಉದ್ಘಾಟನೆ ಮಾಡಲಿದ್ದಾರೆ. ನಗರ ಸಭೆ ಹಾಗೂ ನಗರ ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಹಿಳೆಯರ ಸ್ಪರ್ಧಾ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಉದ್ಘಾಟಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೂಡಿಗೆ ಕ್ರೀಡಾ ಶಾಲೆ ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ, ನಗರ ದಸರಾ ಸಮಿತಿ ಖಜಾಂಚಿ ಸಬಿತಾ ವಿಜಯ್, ದಸರಾ ಸಾಂಸ್ಕೃತಿಕ ಸಮಿತಿ ಉಸ್ತುವಾರಿ ಅನಿತಾ ಪೂವಯ್ಯ, ಸಾಧನಾ ಮಹಿಳಾ ಸಹಕಾರ ಸಂಘದ ನಿರ್ದೇಶಕಿ ಪುಷ್ಪಾವತಿ, ಮಡಿಕೇರಿ ನಗರ ಪೊಲೀಸ್ ಠಾಣಾ ಆರಕ್ಷಕ ನಿರೀಕ್ಷಕಿ ಎಸ್. ಅನ್ನಪೂರ್ಣ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯೆ ಮಿನಾಝ್ ಪ್ರವೀಣ್, ಒಡಿಪಿ ಸಂಸ್ಥೆ ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೆಜಸ್, ನಗರ ಸಭಾ ಸದಸ್ಯರುಗಳಾದ ಸವಿತಾ ರಾಖೇಶ್, ಚಿತ್ರಾವತಿ, ಮೇರಿ ವೇಗಸ್, ನೀಮಾ ಅರ್ಷದ್, ಸಿ.ಕೆ.ಮಂಜುಳಾ, ಕೆ.ಉಷಾ, ವೈ.ಡಿ.ಶ್ವೇತಾ, ಹೆಚ್, ಎನ್. ಶಾರದಾ, ನಾಮ ನಿರ್ದೇಶಿತ ಸದಸ್ಯೆ ಜುಲೇಕಾಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸಬಿತಾ ಉಪಸ್ಥಿತರಿರಲಿದ್ದಾರೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

ಮನರಂಜನಾ ಸ್ಪರ್ಧೆಗಳು: ಮಹಿಳಾ ದಸರಾ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸೀರೆಗೆ ನಿಖರ ಬೆಲೆ ಹೇಳುವದು, ಬಾಂಬ್ –  ಇನ್-  ದ – ಸಿಟಿ, ಕೆರೆ ದಡ ಆಟ, ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್, ಭಾರತೀಯ ಸಾಂಪ್ರದಾಯಿಕ ಉಡುಗೆ ಪ್ರದರ್ಶನ, ಕೇಶ ವಿನ್ಯಾಸ ಸ್ಪರ್ಧೆ, ಬಲೂನ್ ಮತ್ತು ಕಪ್ಪು,ಹಣೆಯಲ್ಲಿ ಇಟ್ಟು ಬಿಸ್ಕೆಟ್ ತಿನ್ನುವದು. ಜಾನಪದ ನೃತ್ಯ ಸ್ಪರ್ಧೆ, ಬಲೂನ್ ಕಾಲಲ್ಲಿ ಹಿಡಿದು ಓಡುವುದು, ದಸರಾ ಸಂಬಂಧಿತ ರಸಪ್ರಶ್ನೆ ಸ್ಪರ್ಧೆ, ವಾಲಗ ಕುಣಿತ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಾಧಕರಿಗೆ ಸನ್ಮಾನ: ಮಹಿಳಾ ದಸರಾ ಸಂಭ್ರಮದಲ್ಲಿ ಉತ್ತಮ ಸೇವೆ ಸಲ್ಲಿಸುವದರೊಂದಿಗೆ ಸಾಧನೆ ಮಾಡಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ, ಪೌರಸೇವಾ ನೌಕರರನ್ನು ಸನ್ಮಾನಿಸಿ ಗೌರವಿಸಲಾಗುವದೆಂದು ತಿಳಿಸಿದ್ದಾರೆ.

ಸಾಂಸ್ಕೃತಿಕ ವೈಭವ: ಸಂಜೆ 6 ಗಂಟೆಯಿಂದ ಕಲಾ ಸಂಭ್ರಮ ವೇದಿಕೆಯಲ್ಲಿ ಮಹಿಳೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿವೆ ಎಂದು ಸಂತೋಷ್ ತಿಳಿಸಿದ್ದಾರೆ.

coorg buzz
coorg buzz