ಏನಿದು ಮೆದುಳು ತಿನ್ನುವ ಅಮೀಬಾ – ಡಾ. ಕೆ.ಬಿ. ಸೂರ್ಯಕುಮಾರ್‌ ಅವರ ಸಕಾಲಿಕ ಬರಹ

Share this post :

ಕೇರಳದಲ್ಲಿ ಕೆಲವರಿಗೆ ಮೆದುಳಿನಲ್ಲಿ ಅಮೀಬಾ ಸೋಂಕು ಪತ್ತೆಯಾಗಿದ್ದು, ಜನ ಆತಂಕಕ್ಕೀಡಾಗುಂತೆ ಮಾಡಿದೆ. ಇದರ ಆತಂಕ ನೆರೆಯ ರಾಜ್ಯಗಳಲ್ಲೂ ಮೂಡಿದೆ. ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ. ಕೆ.ಬಿ. ಸೂರ್ಯಕುಮಾರ್‌ ಅವರು ಎರಡು ವರ್ಷದ ಹಿಂದೆ ಬರೆದ ಲೇಖನ ಸಕಾಲಿಕವಾಗಿದೆ.

ಈ ಲೇಖನ ನಿಮ್ಮ ಮಾಹಿತಿಗಾಗಿ ಮಾತ್ರ. ಇದು ಅಪರೂಪದ ರೋಗವಾಗಿದ್ದು ಯಾವುದೋ ಒಂದು ಲಕ್ಷಣ ಕಂಡ ಕೂಡಲೇ ತನಗೆ ಆ ರೋಗವಿದೆ ಎಂದು ತಪ್ಪಾಗಿ ಯಾರೂ ತಿಳಿದುಕೊಳ್ಳಬೇಡಿ!.

ಇತ್ತೀಚಿಗೆ ಕೇರಳದಿಂದ ಬಂದ ಒಂದು ವರದಿಯ ಪ್ರಕಾರ ಕಲುಷಿತ ನೀರಿನಲ್ಲಿ ಕಂಡು ಬರುವ ಸ್ವತಂತ್ರ ಅಮೀಬಾದಿಂದ ಉಂಟಾದ ಅಪರೂಪದ ಮೆದುಳಿನ ಸೋಂಕಾದ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಹದಿನಾಲ್ಕು ವರ್ಷದ ಬಾಲಕ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇಂತಹ ಪ್ರಕರಣಗಳ ಮೊದಲ ನಿದರ್ಶನವು ಮೇ 21 ರಂದು ಮಲಪ್ಪುರಂನ ಐದು ವರ್ಷದ ಬಾಲಕಿಯ ಸಾವಿನಲ್ಲಿ ಕಂಡುಬಂದು, ಎರಡನೆಯದು ಜೂನ್ 25 ರಂದು ಕಣ್ಣೂರಿನ ಹದಿಮೂರು ವರ್ಷದ ಬಾಲಕಿಯ ಸಾವಿನೊಂದಿಗೆ ಮುಂದುವರೆ ಯಿತು. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಮಕ್ಕಳು ಅಲ್ಲಿನ ಸಣ್ಣ ಕೆರೆಯಲ್ಲಿ ಸ್ನಾನ ಮಾಡಿದ್ದು, ಈಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಕ್ತವಾಗಿ ಜೀವಿಸುವ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾಗಳು ಕಲುಷಿತ ನೀರಿನಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಸಂಭವಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮೆದುಳನ್ನು ತಿನ್ನುವ ಈ ರೋಗವನ್ನು ಪ್ರಾಥಮಿಕ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (Primary Amoebic Meningoencephalitis ) ಎಂದು ಕರೆಯುತ್ತಾರೆ. ಇದು ನೇಗ್ಲೇರಿಯಾ ಫೌಲೆರಿ ಎಂಬ ಅಮೀಬಾ ಕ್ರಿಮಿಯಿಂದ ಉಂಟಾಗುವ ಅಪರೂಪದ, ಆದರೆ ಮಾರಣಾಂತಿಕ ಸೋಂಕು. ಸರೋವರಗಳು, ನದಿಗಳಂತಹ ಬೆಚ್ಚಗಿನ ಸಿಹಿನೀರಿನ ಪರಿಸರದಲ್ಲಿ ಮತ್ತು ಅಸಮರ್ಪಕವಾಗಿ ಕ್ಲೋರಿನೇಟೆಡ್ ಮಾಡಿದ ಈಜುಕೊಳಗಳಲ್ಲಿ ಈ ಮುಕ್ತ ಜೀವಂತ ಸೂಕ್ಷ್ಮಜೀವಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸಾಮಾನ್ಯವಾಗಿ ಈಜು ಅಥವಾ ಡೈವಿಂಗ್‌ನಂತಹ ಚಟುವಟಿಕೆಗಳಲ್ಲಿ ಕಲುಷಿತ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ನೇಗ್ಲೇರಿಯಾ ಫೌಲೆರಿ ಮನುಷ್ಯರಿಗೆ ಸೋಂಕು ತರುತ್ತದೆ. ಇದು ಮೂಗಿನಲ್ಲಿನ ಘ್ರಾಣ ನರದ ( ಆಲ್ ಫ್ಯಾಕ್ಟರಿ ನರ್ವ್) ಮೂಲಕ ಮೆದುಳಿಗೆ ಚಲಿಸಿ, ಅಲ್ಲಿ ಅದು ಮೆದುಳಿನ ಅಂಗಾಂಶವನ್ನು ನಾಶ ಮಾಡಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ 25°C ಗಿಂತ ನೀರಿನ ತಾಪಮಾನವು ಹೆಚ್ಚಾದಾಗ ಅಲ್ಲಿನ ವಾತಾವರಣದಲ್ಲಿ ನೈಗ್ಲೇರಿಯಾ ಫೌಲೆರಿ ವೃದ್ಧಿಸಬಹುದು.

PAM ನ ಆರಂಭಿಕ ರೋಗಲಕ್ಷಣಗಳು ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಮೆನಿಂಜೈಟಿಸ್ ಅನ್ನು ಹೋಲುವುದರಿಂದ, ಇದು ತಪ್ಪಾದ ರೋಗನಿರ್ಣಯಕ್ಕೆ ( ಡಯಾಗ್ನೋಸಿಸ್ ) ಕಾರಣವಾಗ ಬಹುದು. ರೋಗ ಲಕ್ಷಣಗಳು ಸಾಮಾನ್ಯವಾಗಿ ಬ್ಯಾಕ್ಟೀರಿಯ ಶರೀರಕ್ಕೆ ಒಡ್ಡಿಕೊಂಡ ಕೆಲವು ದಿನಗಳ ನಂತರ ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಈ ಕೆಳಗಿನ ಲಕ್ಷಣಗಳು ಒಳಗೊಂಡಿರಬಹುದು.

ತಲೆ ನೋವು: ಸಾಮಾನ್ಯವಾಗಿ ಹಣೆಯ ಹಿಂದಿನ ಸೈನಸ್ ಎಂಬ ಸ್ಥಳದಲ್ಲಿ ಕಂಡು ಬರುವ ತೀವ್ರವಾದ ತಲೆನೋವು ಇದರ ಮುಖ್ಯ ಲಕ್ಷಣ. ನಂತರ ದೇಹವು ಸೋಂಕಿನ ವಿರುದ್ಧ ಹೋರಾಡಲು ಪ್ರಯತ್ನಿಸಿದಾಗ ಹೆಚ್ಚಿದ ತಾಪಮಾನದಿಂದ ಜ್ವರ ಬರುತ್ತದೆ.

ಸೋಂಕಿನ ಸಾಮಾನ್ಯ ಪ್ರತಿಕ್ರಿಯೆಗಳು ಮತ್ತು ತಲೆ ಬುರುಡೆಯ ಒಳಗೆ ಹೆಚ್ಚಿದ ಒತ್ತಡ ( ಇಂಟ್ರಾಕ್ರೇನಿಯಲ್ ಒತ್ತಡ) ದಿಂದಾಗಿ ವಾಕರಿಕೆ ಮತ್ತು ವಾಂತಿಯಾಗುತ್ತದೆ. ಮೆದುಳು ಜ್ವರದ ( ಮೆನಿಂಜೈಟಿಸ್‌ನ ) ವಿಶಿಷ್ಟ ಲಕ್ಷಣ ಕುತ್ತಿಗೆಯ ಹಿಂಭಾಗದಲ್ಲಿ ಗಟ್ಟಿಯಾಗುವಿಕೆ ( ಸ್ಟಿಫ್ ನೆಕ್). ಇದು ಮೆದುಳಿನ ಪೊರೆಗಳ ಉರಿಯೂತದಿಂದ ಉಂಟಾಗುತ್ತದೆ.

ಬದಲಾದ ಮಾನಸಿಕ ಸ್ಥಿತಿಯಿಂದಾಗಿ ಗೊಂದಲ, ಭ್ರಮೆಗಳು ಅಥವಾ ಸಮತೋಲನ ಕಳೆದುಕೊಳ್ಳುವುದು, ಫೋಟೊಫೋಬಿಯಾ ಎಂದು ಕರೆಯಲಾಗುವ ಬೆಳಕಿಗೆ ಸೂಕ್ಷ್ಮತೆ ಈ ರೀತಿಯ ಮೆದುಳು ಜ್ವರಗಳಲ್ಲಿ ( ಮೆನಿಂಜೈಟಿಸ್‌ ) ಸಾಮಾನ್ಯ ಲಕ್ಷಣವಾಗಿದೆ.

ಬ್ಯಾಕ್ಟೀರಿಯಾ ಸರಿದು ಹೋದ ಮೂಗಿನ ಹಾದಿಗಳಲ್ಲಿ ವಾಸನೆಯ ನಷ್ಟ ಆರಂಭಿಕವಾಗಿ ಉಂಟಾಗುವ ಇತರ ಚಿಹ್ನೆ.
ರೋಗವು ವೇಗವಾಗಿ ಮುಂದುವರೆದಂತೆ, ತೀವ್ರವಾದ ನರವೈಜ್ಞಾನಿಕ ದುರ್ಬಲತೆ ಮತ್ತು ಪ್ರಜ್ಞಾಸೀನ ಸ್ಥಿತಿ (ಕೋಮಾ) ಯಾಗಿ ಉಲ್ಬಣಗೊಳ್ಳಬಹುದು. ಸಾಮಾನ್ಯವಾಗಿ ರೋಗಲಕ್ಷಣದ ಪ್ರಾರಂಭದ ಒಂದರಿಂದ ಹದಿನೆಂಟು ದಿನಗಳಲ್ಲಿ ಸಾವಿಗೆ ಕೂಡಾ ಕಾರಣವಾಗಬಹುದು.
ಈ ರೋಗದ ತ್ವರಿತ ಪ್ರಗತಿ ಮತ್ತು ಸೋಂಕಿನ ಅಪರೂಪದ ಕಾರಣದಿಂದಾಗಿ ಚಿಕಿತ್ಸೆ ನೀಡಲು ಬಹಳ ಕಷ್ಟಕರವಾಗುತ್ತದೆ . ಆದಾಗ್ಯೂ, ಚಿಕಿತ್ಸೆಯ ತಂತ್ರಗಳಲ್ಲಿ ಕೆಲವು ರೀತಿಯ ಸಾಮಾನ್ಯ ಕ್ರಮಗಳು ಸೇರಿವೆ.

ರಕ್ತನಾಳಗಳ ಮೂಲಕ ( ಇಂಟ್ರಾವೆನಸ್ ) ಮತ್ತು ಬೆನ್ನು ಹುರಿಯ ( ಇಂಟ್ರಾಥೆಕಲ್ ) ಮೂಲಕ ನೇರವಾಗಿ ಮೆದುಳಿನ ದ್ರವಕ್ಕೆ ( ಸೆರೆಬ್ರೊಸ್ಪೈನಲ್ ಫ್ಲೂಯಿಡ್ ) ಔಷಧಗಳನ್ನು ನೀಡಬಹುದು.
ಕೆಲವೊಂದು ಮೇಲ್ದರ್ಜೆಯ ಆಂಟಿಬಯೋಟಿಕ್‌ಗಳು ಮತ್ತು ಆಂಟಿಪ್ರೊಟೊಜೋಲ್ ಏಜೆಂಟ್‌ಗಳನ್ನು ಇತರ ಔಷಧಿಗಳೊಂದಿಗೆ ಸಂಯೋಜನೆಯಲ್ಲಿ ಉಪಯೋಗಿಸಲಾಗುತ್ತದೆ.

ಬೆಂಬಲ ರಕ್ಷಣೆ ( ಸಪೋರ್ಟಿವ್ ಕೇರ್ ) ಗಾಗಿ ಯಾಂತ್ರಿಕ ವಾತಾಯನ ಮತ್ತು ಮೆದುಳು ಒಳಗಿನ ( ಇಂಟ್ರಾಕ್ರೇನಿಯಲ್ ) ಒತ್ತಡದ ನಿರ್ವಹಣೆಗೆ ತೀವ್ರ ನಿಗಾ ಘಟಕ (ICU) ಬೆಂಬಲವು ಆಗಾಗ್ಗೆ ಅಗತ್ಯವಾಗಿರುತ್ತದೆ.
ಮೆದುಳಿನ ಊತವನ್ನು ಕಡಿಮೆ ಮಾಡಲು ದೇಹವನ್ನು ತಂಪಾಗಿಸುವ ಚಿಕಿತ್ಸಕ ಲಘೂಷ್ಣತೆ ( ಥೆರಪ್ಯೂಟಿಕ್ ಹೈಪೊ ಥರ್ಮಿಯಾ ) ವನ್ನು ಕೆಲವು ಸಂದರ್ಭಗಳಲ್ಲಿ ಬಳಸಲಾಗುತ್ತದೆ.

ಈ ರೋಗ ಆವರಿಸಿದ ಮೇಲೆ ಚಿಕಿತ್ಸೆ ಮಾಡುವುದು ಕಷ್ಟಕರವಾಗಿರುವುದರಿಂದ ಅದನ್ನು ತಡೆಗಟ್ಟುವ ಬಗ್ಗೆ ಯೋಚಿಸ ಬೇಕಾಗುತ್ತದೆ.
ನೈಗ್ಲೇರಿಯಾ ಫೌಲೆರಿ ಇರಬಹುದು ಎಂದು ತಿಳಿದಿರುವ ಪ್ರದೇಶಗಳಲ್ಲಿ, ವಿಶೇಷವಾಗಿ ಬಿಸಿ ವಾತಾವರಣದಲ್ಲಿ ಬೆಚ್ಚಗಿನ ಕೆರೆಯಲ್ಲಿನ ನೀರಲ್ಲಿ ಈಜುವುದನ್ನು ತಪ್ಪಿಸ ಬೇಕು. ಅಥವಾ
ಇಂತಹ ನೀರಿನ ಚಟುವಟಿಕೆಗಳಲ್ಲಿ ತೊಡಗಿರುವಾಗ ಮೂಗಿನ ಕ್ಲಿಪ್‌ಗಳನ್ನು ಬಳಸುವುದು ಅಥವಾ ಮೂಗು ಮುಚ್ಚಿ ಕೊಂಡು ನೀರು ಒಳಗೆ ಹೋಗದಂತೆ ನೋಡಿಕೊಳ್ಳಬೇಕು.

ಈಜುಕೊಳಗಳು ಮತ್ತು ಬಿಸಿನೀರಿನ ತೊಟ್ಟಿಗಳಲ್ಲಿ ಸಾಕಷ್ಟು ಕ್ಲೋರಿನೇಶನ್ ಮತ್ತು ನೀರಿನ ನಿಯಮಿತ ಪರೀಕ್ಷೆಯನ್ನು ಖಚಿತ ಪಡಿಸಿ ಕೊಳ್ಳುವುದು.
ಸಾರ್ವಜನಿಕ ಜಾಗೃತಿಯ ಕ್ರಮವಾಗಿ ಅಪಾಯಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದರಿಂದ ಸೋಂಕಿನ ಸಂಭವವನ್ನು ಕಡಿಮೆ ಮಾಡಬಹುದು .

ಕೊನೆಯದಾಗಿ ನೈಗ್ಲೇರಿಯಾ ಫೌಲೆರಿಯಿಂದ ಉಂಟಾಗುವ ಮೆದುಳು ತಿನ್ನುವ ಅಮೀಬಿಕ್ ಮೆನಿಂಜೈಟಿಸ್ ಬಹಳ ಅಪರೂಪದ ರೋಗವಾಗಿದ್ದರೂ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿರುವ ವಿನಾಶಕಾರಿ ಕಾಯಿಲೆಯಾಗಿದೆ. ಇದರಲ್ಲಿ ರೋಗಲಕ್ಷಣಗಳ ಆರಂಭಿಕ ಗುರುತಿಸುವಿಕೆ ಮತ್ತು ತ್ವರಿತ, ಆಕ್ರಮಣಕಾರಿ ಚಿಕಿತ್ಸೆಯು ಅತ್ಯಗತ್ಯ. ಈ ಅಪರೂಪದ ಮಾರಣಾಂತಿಕ ಸೋಂಕನ್ನು ತಪ್ಪಿಸಲು ತಡೆಗಟ್ಟುವಿಕೆಯೊಂದೇ ಅತ್ಯುತ್ತಮ ತಂತ್ರವಾಗಿದೆ.

coorg buzz
coorg buzz