ವೀರಾಜಪೇಟೆ : ಪ್ರಾಣಿಗಳನ್ನು ಮನುಷ್ಯರು ಪ್ರೀತಿಯಿಂದ ಕಾಣಬೇಕು ಎಂದು ವಿರಾಜಪೇಟೆಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಕೇಶ್ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರಾಣಿಗಳ ದಿನಾಚರಣೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತಿದ್ದರು. ಪ್ರಾಣಿಗಳನ್ನು ಹಿಂಸಿಸದೆ ಅವುಗಳನ್ನು ನಾವು ಪ್ರೀತಿಯಿಂದ ಕಾಣಬೇಕು. ಮನುಷ್ಯರು ಅವುಗಳನ್ನು ಹಿಂಸಿಸಿದರೆ ಅವುಗಳು ಕೂಡ ನಮಗೆ ಹಾನಿಯನ್ನು ಮಾಡಬಲ್ಲವು ಎಂದರು.
ಮಕ್ಕಳು ತಮ್ಮ ವಿದ್ಯಾರ್ಥಿ ಹಂತದಿಂದಲೇ ಪ್ರಾಣಿಗಳ ಬಗ್ಗೆ ಅರಿವನ್ನು ಹೊಂದಿರಬೇಕು. ನಾವು ಬದುಕುವುದರ ಜೊತೆಗೆ ಅವುಗಳನ್ನು ಬದುಕಲು ಬಿಡಬೇಕು. ಪ್ರಾಣಿಗಳ ಆರೈಕೆಯಿಂದ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ರೋಗಗಳಿಂದ ರಕ್ಷಿಸಬಹುದಾಗಿದೆ ಎಂದರು. ಮಕ್ಕಳಿಗೆ ಪ್ರಾಣಿಗಳ ಚಲನ ವಲನ, ಆಹಾರ, ಆರೋಗ್ಯದ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಪೂಜಾ ಸಜೇಶ್ ಮಾತನಾಡಿ ಮಕ್ಕಳಿಗೆ ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪೋಷಕರು ಸಹ ವಿವಿಧ ಸಾಕು ಪ್ರಾಣಿಗಳನ್ನು ಕರೆತಂದು ಸಹಕಾರವನ್ನು ನೀಡಿರುತ್ತಾರೆ. ಮಕ್ಕಳಿಗೆ ಜವಾಬ್ದಾರಿ ಅರಿವು ಮೂಡಬೇಕು. ಪ್ರಾಣಿಗಳ ಭಾವನೆಗಳು ಅರ್ಥವಾಗಬೇಕು. ಪ್ರಾಣಿಗಳನ್ನು ನಮ್ಮ ಒಡನಾಡಿಗಳು ಎಂದು ಭಾವಿಸಿ ಅವುಗಳಿಗೆ ಹಾನಿಯಾಗದ ಹಾಗೇ ಸಾಕಿ ಸಲಹಬೇಕು ಎಂದರು.
ಮಕ್ಕಳು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿ ಎಂದು ಕಿವಿ ಮಾತನ್ನು ಹೇಳಿದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಸಹ ವಿವಿಧ ಸಾಕು ಪ್ರಾಣಿಗಳನ್ನು ಶಾಲೆಯ ಆವರಣಕ್ಕೆ ತಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ತಾತಂಡ ತಿಮ್ಮಣ್ಣ, ಶಾಲಾ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ ಮೀರಾ ಪೂಣಚ್ಚ, ಸಹ ಶಿಕ್ಷಕರು, ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು.





