ಮೈಸೂರು : ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡುವುದಕ್ಕೆ ಬಿಜೆಪಿಯ ಕೆಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರ್ಕಾರದ ನಿಲುವನ್ನು ಸ್ವಾಗತಿಸಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಸಂಸದ ಯದುವೀರ್, ಬಾನು ಮುಸ್ತಾಕ್ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಆಯ್ಕೆಯಲ್ಲಿ ನನಗೆ ಯಾವುದೇ ಅಭಿಪ್ರಾಯ ಇಲ್ಲ. ತಾಯಿ ಚಾಮುಂಡೇಶ್ವರಿಗೆ ಗೌರವ ಕೊಟ್ಟರೆ ನಮ್ಮದೇನು ತಕರಾರು ಇಲ್ಲ ಎಂದಿದ್ದಾರೆ.
ನಮ್ಮ ಕನ್ನಡದ ಧ್ವಜದ ಬಣ್ಣ ಕುರಿತು ಅವರ ಹೇಳಿಕೆ ನೋಡಿದ್ದೇನೆ. ಅದು ತಪ್ಪು. ಅದಕ್ಕಾಗಿಯೇ ಕೆಲವರು ವಿರೋಧ ಮಾಡುತ್ತಿದ್ದಾರೆ. ನಮ್ಮ ಧರ್ಮಕ್ಕೆ ವಿರೋಧಿಸದೆ ಅವರು ಉದ್ಘಾಟನೆ ಮಾಡಲಿ. ನಮ್ಮ ಧಾರ್ಮಿಕ ಭಕ್ತಿಗೆ ಧಕ್ಕೆ ಬರಬಾರದು. ಚಾಮುಂಡೇಶ್ವರಿಗೆ ಗೌರವ ಕೊಡಬೇಕು ಅದಷ್ಟೇ ನಮ್ಮ ಅಭಿಪ್ರಾಯ. ನಮ್ಮ ಪಾರ್ಟಿಯ ನಿಲುವಿಗೆ ನನ್ನ ನಿಲುವು ಒಂದೇ. ನಮ್ಮ ಧರ್ಮ ಗೌರವಿಸಿ ಚಾಮುಂಡೇಶ್ವರಿಗೆ ಕೊಡಬೇಕಾದ ಗೌರವವನ್ನು ಬಾನು ಮುಸ್ತಾಕ್ ನೀಡಲಿ ಎಂದರು.



