ವೀರಾಜಪೇಟೆ : ಕೊಡಗು ಜಿಲ್ಲೆಯಲ್ಲಿ ಹೆಚ್ಚು ಜನಪ್ರಿಯತೆ, ಆಕರ್ಷಣೆ ಪಡೆದಿರುವುದು ವೀರಾಜಪೇಟೆಯ ಸಾಮೂಹಿಕ ಗಣೇಶೋತ್ಸವ. ಹಲವು ಕಾರಣದಿಂದಾಗಿ ಇದು ಜನಾಕರ್ಷಣೆಯ ಕೇಂದ್ರವಾಗಿದೆ. ಈ ಬಾರಿಯ ಉತ್ಸವಕ್ಕೆ ಪಟ್ಟಣ ಸಜ್ಜಾಗಿದ್ದು, ಅಂತಿಮ ಹಂತದ ತಯಾರಿ ಭರದಿಂದ ಸಾಗಿದೆ. ಈ ಬಾರಿ 22 ಕಡೆಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಆಚರಣೆ 200 ವರ್ಷಗಳಿಂದ ನಡೆದುಕೊಂಡು ಬಂದಿದೆ. ಸೆಪ್ಟೆಂಬರ್ 6 ರಂದು ರಾತ್ರಿ ಶೋಭಾಯಾತ್ರೆ ನಡೆಯಲಿದ್ದು, 7 ರಂದು ನಸುಕಿನ ಜಾವ ಗೌರಿ ಕೆರೆಯಲ್ಲಿ ವಿಸರ್ಜನೆ ನಡೆಯಲಿದೆ. ಈ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಸಮಿತಿಗಳು ಅಗತ್ಯ ತಯಾರಿಯಲ್ಲಿ ನಿರತವಾಗಿವೆ. ಪಟ್ಟಣದ ಎಲ್ಲೆಡೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಕಣ್ಣು ಕುಕ್ಕುತ್ತಿದೆ.



