ವಿರಾಜಪೇಟೆ ಕಾವೇರಿ ಕಾಲೇಜು ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

Share this post :

ಆಧುನಿಕ ಜೀವನ ಶೈಲಿಯಿಂದ ಕೃಷಿ ಭೂಮಿಯಿಂದ ದೂರ ಉಳಿದ ಯುವ ಜನತೆ ಒಂದು ದಿನವಾದರೂ ಕೃಷಿ ಭೂಮಿಯ ಸಂಪರ್ಕಕ್ಕೆ ಬಂದು ರೈತಾಪಿ ಬದುಕಿನ ಅನುಭವ ಪಡೆಯಬೇಕು ಎಂದು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಅಭಿಪ್ರಾಯ ಪಟ್ಟರು.

ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಟ್ಟಂಗಾಲದ ನಿವೃತ್ತ ಪೋಲಿಸ್ ಉನ್ನತಾಧಿಕಾರಿ.ಬಿ.ಡಿ.ಮಂದಪ್ಪ ರವರ ಗದ್ದೆಗಳಲ್ಲಿ ಬುಧವಾರ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಅವರು ಇತ್ತೀಚಿನ ವರ್ಷದಲ್ಲಿ ಯುವಜನತೆ ಕೃಷಿ ಭೂಮಿಯಿಂದ ದೂರ ಸರೆಯುತಿದ್ದು, ಹಿಂದಿನ ಕಾಲದಲ್ಲಿ ಕೃಷಿ ಭೂಮಿಯ ಜೊತೆಗೆ ಹೊಂದಿದ್ದ ಅವಿನಾಭಾವ ಸಂಬಂಧದಿಂದ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಕೃಷಿ ಭೂಮಿಯಿಂದ ವಿಮುಖ ರಾಗುತ್ತಿದ್ದಾರೆ. ವರ್ಷದಲ್ಲಿ ಒಂದು ಬಾರಿಯಾದರೂ ವಿದ್ಯಾರ್ಥಿಗಳು ಕೃಷಿ ಭೂಮಿಯ ಅನುಭವ ಪಡೆಯಬೇಕು. ವಿದ್ಯಾರ್ಥಿಗಳು ತಮ್ಮ ಪ್ರತಿನಿತ್ಯದ ಮನೆ ಹಾಗೂ ಶಿಕ್ಷಣದ ಜಂಜಾಟವನ್ನು ಮರೆತು ಪ್ರಕೃತಿಯ ಮಧ್ಯೆ ಕೃಷಿಭೂಮಿ, ನೀರು ,ಕೆಸರು, ಮಳೆ ಮುಂತಾದವುಗಳ ಅನುಭವವನ್ನು ಪಡೆದು ಸಂಭ್ರಮಿಸಿ ದೈಹಿಕ ಹಾಗೂ ಮಾನಸಿಕವಾಗಿ ಪುನಶ್ಚೇತನಗೊಳಿಸಲು ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದರು .

ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಪ್ರಿಯ ಮುದ್ದಪ್ಪ ಮಾತನಾಡಿ. ಕೃಷಿಯು ನಮಗೆ ಪೂರ್ವಜರಿಂದ ಬಳುವಳಿಯಾಗಿ ಬಂದ ಒಂದು ಉಡುಗರೆ. ಆದರೆ ಇತ್ತೀಚಿನ ಸಮಯದಲ್ಲಿ ಆಧುನಿಕ ಬದುಕಿನ ಜಂಜಾಟದಲ್ಲಿ ಕಣ್ಮರೆಯಾಗುತ್ತಿರುವ ಈ ಕೃಷಿ ಬದುಕಿನ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವನಿಟ್ಟಿನಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಕೃಷಿ ಭೂಮಿಯೊಂದಿಗೆ ವಿದ್ಯಾರ್ಥಿಗಳ ಒಡನಾಟವನ್ನು ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳ ನಡುವೆ ಪರಸ್ಪರ ಸಹಕಾರ, ಒಗ್ಗಟ್ಟು , ಕ್ರೀಡಾ ಮನೋಭಾವನೆ ಹೆಚ್ಚಿಸುದರೊಂದಿಗೆ ಒಂದು ದಿನವಾದರು ಕೃಷಿ ಭೂಮಿಯ ಆಹ್ಲಾದ ಪಡೆಯುವಂತೆ ಮಾಡುಲು ಕ್ರೀಡಾಕೂಟ ಆಯೋಜಿಸಲಾಗಿದ್ದು ಇದೆ ರೀತಿ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಕ್ರೀಡೆಯನ್ನು ಆಯೋಜಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಕೆಸರುಗದ್ದೆಯಲ್ಲಿ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ಫುಟ್ಬಾಲ್ , ಥ್ರೋಬಾಲ್ ಹಾಗೂ ಟ್ರೆಷರ್ ಹಂಟ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಹುಡುಗರ ವಿಭಾಗದಲ್ಲಿ ಓಟದ ಸ್ಪರ್ಧೆಯಲ್ಲಿ ಓಶಿನ್ ಬೋಪಯ್ಯ ಪ್ರಥಮ, ಭವಿಷ್ ದ್ವಿತೀಯ, ಲಿಖಿತ್ ತೃತೀಯ ಸ್ಥಾನವನ್ನು ಪಡೆದರು . ಹಗ್ಗ ಜಗ್ಗಾಟದಲ್ಲಿ ಕಪ್ಪು ತಂಡ ಪ್ರಥಮ, ಹಸಿರು ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಫುಟ್ಬಾಲ್ ನಲ್ಲಿ ಹಸಿರು ತಂಡ ಪ್ರಥಮ , ಕೆಂಪು ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಟ್ರಫರ್ ಹಂಟ್ ವಿಭಾಗದಲ್ಲಿ ಕಪ್ಪು ತಂಡ ಪ್ರಥಮ, ಕೆಂಪು ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು .

ಹುಡುಗಿಯರ ವಿಭಾಗದಲ್ಲಿ ಓಟದ ಸ್ಪರ್ಧೆಯಲ್ಲಿ ಶಮ್ಲಾ ಪ್ರಥಮ , ರೀಷ್ಮ ದ್ವಿತೀಯ , ಹೇಮಾವತಿ ತೃತೀಯ ಸ್ಥಾನವನ್ನು ಪಡೆದರು. ಹಗ್ಗ ಜಗ್ಗಾಟದಲ್ಲಿ ಕಪ್ಪು ತಂಡ ಪ್ರಥಮ, ಹಸಿರು ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು . ತ್ರೋಬಾಲ್ ನಲ್ಲಿ ಹಸಿರು ತಂಡ ಪ್ರಥಮ, ನೀಲಿ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಟ್ರೆಷರ್ ಹಂಟ್ನಲ್ಲಿ ನೀಲಿ ತಂಡ ಪ್ರಥಮ, ಕಪ್ಪು ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು .

ಕ್ರೀಡಾಕೂಟದ ಸಂದರ್ಭ ಕಾಲೇಜಿನ ಉಪನ್ಯಾಸಕ ವರ್ಗ , ವಿದ್ಯಾರ್ಥಿಗಳು ಆಡಳಿತಾತ್ಮಕ ಸಿಬ್ಬಂದಿಗಳು ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

coorg buzz
coorg buzz