ವ್ಯಸನಕ್ಕೆ ದಾಸರಾಗುವುದು ಬಲು ಸುಲಭ, ವ್ಯಸನ ಮುಕ್ತರಾಗುವುದು ಬಲು ಕಷ್ಟ: ಡಾ. ಚೇಂದಿರ ಬೋಪಣ್ಣ

Share this post :

ಇಂದಿನ ಸಮಾಜದಲ್ಲಿ ತಂಬಾಕು ಸೇವನೆ ಪ್ರತಿಷ್ಠೆ ಹಾಗೂ ಗೌರವದ ಪ್ರತಿಕವೆಂಬಂತೆ ಬಿಂಬಿತವಾಗುತ್ತಿರುದರಿಂದ ಯುವ ಜನತೆ ಹೆಚ್ಚಾಗಿ ತಂಬಾಕು ಉತ್ಪನ್ನಗಳ ಕಡೆ ಆಕರ್ಷಿತರಾಗುತ್ತಿರುವುದು ಕಳವಳಕಾರಿ ವಿಚಾರ ಎಂದು ಆಶೀರ್ವಾದ ಆಸ್ಪತ್ರೆಯ ವೈದ್ಯರಾದ ಡಾ. ಚೇಂದಿರ ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜ ವತಿಯಿಂದ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಸಭಾಭವನದಲ್ಲಿ ಶನಿವಾರ ನಡೆಸಲಾಗ ತಂಬಾಕು ಮುಕ್ತ ಸಮಾಜ ಜಾಗೃತಿ ಕಾರ್ಯಕ್ರಮ ಹಾಗೂ ಕೃತಕ ಕಾಲು ಜೋಡಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಜೀವನವು ವ್ಯಥೆಯಿಂದ ಕೂಡಿದ ಕಥೆಯಾಗಬಾರದು.

ಪ್ರಸ್ತುತ ಸಮಾಜವನ್ನು ನೋಡಿದಾಗ ಒತ್ತಡದ ಜೀವನ, ಗುರುತಿಸಿಕೊಳ್ಳುವಿಕೆ , ವೈಯಕ್ತಿಕ ಹೊಸತನ ಮುಂತಾದ ಕಾರಣದಿಂದಾಗಿ ವಿವಿಧ ರೀತಿಯ ತಂಬಾಕು ಉತ್ಪನ್ನಗಳ ಸೇವನೆಯನ್ನು ಆರಂಭಿಸುತ್ತಿದ್ದಾರೆ . ಅದರಲ್ಲಿಯೂ 18 ರಿಂದ 25 ರ್ಷದೊಳಗಿನ ಯುವಕ ಯುವತಿಯರು ಇತ್ತೀಚಿನ ದಿನಗಳಲ್ಲಿ ಹೆಚ್ಚು ವ್ಯಸನದ ದಾಸರಾಗುತ್ತಿದ್ದಾರೆ. ಈ ರೀತಿಯ ತಂಬಾಕು ಸೇವನೆಯಿಂದ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುವುದರೊಂದಿಗೆ ಜೀವನವನ್ನು ಕೂಡ ಹಾಳು ಮಾಡಿಕೊಳ್ಳುವುದರತ್ತ ಸಾಗುತ್ತಿದ್ದಾರೆ. ಧೂಮಪಾನ ಮಾಡುವುದರಿಂದ ಕೇವಲ ಧೂಮಪಾನಿಗೆ ಮಾತ್ರ ಹಾನಿಯಲ್ಲ ಧೂಮಪಾನದಿಂದ ಹೊರಗೆ ಸೂಸುವ ವಿಷಕಾರಿ ಅಂಶಗಳನ್ನು ಸೇವನೆ ಮಾಡುವುದರಿಂದ ಇತರರ ಆರೋಗ್ಯದಲ್ಲೂ ತೊಂದರೆಯಾಗುತ್ತದೆ. ಪ್ರಮುಖವಾಗಿ ಕ್ಯಾನ್ಸರ್ , ಶ್ವಾಸಕೋಶದ ಸಮಸ್ಯೆ , ಹೃದಯ ಸಂಬಂಧಿ ಕಾಯಿಲೆ , ಅಂಗಾಂಗ ಹಾನಿಯಂತಹ ಸಮಸ್ಯೆಗಳಿಗೆ ತುತ್ತಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದರೊಂದಿಗೆ ಕುಟುಂಬದ ನೆಮ್ಮದಿ ಹಾಳು ಮಾಡುತ್ತಾರೆ. ಆದ್ದರಿಂದ ತಂಬಾಕು ಉತ್ಪನ್ನಗಳಿಂದ ದೂರವಿದ್ದು ಉತ್ತಮ ಜೀವನ ಶೈಲಿಯನ್ನು ಅನುಸರಿಸಿಕೊಂಡು ತಂಬಾಕು ಮುಕ್ತ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದರು.

ಸಂತ ಅನ್ನಮ್ಮ ಚರ್ಚ್ ನ. ಬ್ರದರ್ ಜಯಂತ್ ಮಾತನಾಡಿ ತಂಬಾಕು ಸೇವನೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾನಿ ಮಾಡುತ್ತದೆ.ಆದಷ್ಟು ವ್ಯಸನಕ್ಕೆ ಒಳಗಾದವರನ್ನು ವ್ಯಸನ ಮುಕ್ತಾರನ್ನಾಗಿ ಮಾಡಲು ಪ್ರಯತ್ನವನ್ನು ಮಾಡಬೇಕೆಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂತ ಅನ್ನಮ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್ ದುಶ್ಚಟಗಳು ಎಳೆಯ ವಿದ್ಯಾರ್ಥಿಗಳಲ್ಲಿ ಎಂದಿಗೂ ಬೆಳೆಯಬಾರದು. ಪ್ರತಿದಿನ ಸಮಾಜದಲ್ಲಿ ವಿವಿಧ ರೀತಿಯ ತಂಬಾಕು ಉತ್ಪನ್ನಗಳನ್ನು ಹಲವರು ಸೇವಿಸುವುದನ್ನು ನಾವು ನೋಡುತ್ತಿದ್ದೇವೆ. ಅದರ ಸೇವನೆಯಿಂದ ಉಂಟಾಗುವ ಪರಿಣಾಮವನ್ನು ಅರಿತು ಆದಷ್ಟು ತಂಬಾಕು ಸೇವನೆಯಿಂದ ದೂರವಿರಬೇಕು. ತಂಬಾಕು ಸೇವನೆ ಕ್ಷಣದ ಆನಂದವನ್ನು ನೀಡಿದರು ಅದು ಬೀರುವ ದುಷ್ಪರಿಣಾಮ ತುಂಬಾ ಕಠಿಣವಾಗಿರುತ್ತದೆ. ಕಾರ್ಬನ್ ಮೋನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್ ನಂತಹ ಹಾನಿಕಾರಕ ಅನಿಲಗಳು ತಂಬಾಕು ಸೇವನೆಯಿಂದ ನಮ್ಮ ದೇಹವನ್ನು ಸೇರಿ ಆರೋಗ್ಯವನ್ನು ಕೆಡಿಸುತ್ತದೆ ಎಂದು ತಂಬಾಕು ಸೇವನೆಯಿಂದ ಹೊರ ಬರುವ ರಾಸಾಯನಿಕಗಳು ಮಾನವನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ವಿವರಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜದ ಅಧ್ಯಕ್ಷ ಸುಮೇಶ್ ನಾವೆಲ್ಲಾ ಬಾಲ್ಯದಲ್ಲಿ ಅಡುಗೆ ಮನೆಯಲ್ಲಿದ್ದ ತಿಂಡಿ ತಿನಿಸುಗಳನ್ನು ಕಳುವು ಮಾಡುತ್ತಿದ್ದೆವು. ಆದರೆ ಇತ್ತೀಚಿನ ಯುವ ಸಮೂಹ ತಮ್ಮ ಮನೆಯಲ್ಲಿ ಹಾಗೂ ಹೊರಗೆ ಹಣ, ಆಭರಣ, ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದು ಇದಕ್ಕೆ ಮುಖ್ಯ ಕಾರಣ ತಂಬಾಕು ಸೇವನೆ. ಯಾವಾಗ ತಂಬಾಕು ಸೇವನೆಗೆ ಬೇಕಾದಂತಹ ಹಣ ಅವರ ಬಳಿ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಹಣ ಸಂಪಾದನೆಗೆ ಈ ರೀತಿಯ ಕೆಟ್ಟ ಮಾರ್ಗಗಳನ್ನು ಅನುಸರಿಸುತ್ತಾರೆ. ಸಮಾಜ ಘಾತಕರಾಗಿ ಬೆಳೆಯುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು , ಯುವಜನರು ಆದಷ್ಟು ತಮ್ಮ ಹಿರಿಯರಲ್ಲಿರುವ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು . ದುಶ್ಚಟದಿಂದ ದೂರವಿದ್ದು ವ್ಯಸನ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ತಮ್ಮದೇಯಾದ ಕೊಡುಗೆಯನ್ನು ನೀಡಬೇಕೆಂದರು .

ಕಾರ್ಯಕ್ರಮವನ್ನು ಉದ್ದೇಶಿಸಿ ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಪ್ರಮೋದ್ , ಸಮಾಜ ಸೇವಕ ಚೋಕಂಡ ಸಂಜು , ಭಾರತ ಸರ್ಕಾರದ ರಾಷ್ಟೀಯ ಮಹಿಳಾ ಆಯೋಗದ ಸಲಹೆಗಾರ, ಸಂಪನ್ಮೂಲ ವ್ಯಕ್ತಿ ಪಿ.ಎಸ್. ಶರತ್ ಮಾತನಾಡಿದರು.

ವೇದಿಕೆ ಕಾರ್ಯಕ್ರಮದ ನಂತರ ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಮರದ ಕಾಲುಗಳ ಮೂಲಕ ದೈನಂದಿನ ಚಟುವಟಿಕೆಗಳನ್ನು ನಡೆಸಲು ಕಷ್ಟಪಡುತ್ತಿದ್ದ ಧನೇಶ್ ರವರಿಗೆ ದಾನಿಗಳಾದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ ,ಪೊಯ್ಯೇಟಿರ ಚಂಗಪ್ಪ, ಮಾಳೇಟಿರ ದೇವಯ್ಯ , ಮುಕ್ಕಾಟಿರ ಬೋಪಣ್ಣ , ಸಮಾಜ ಸೇವಕ ಚೋಕಂಡ ಸಂಜು, ಹಿಂದೂ ಮಲೆಯಾಳಿ ಅಸೋಸಿಯೇಷನ್ ನ ಜಿಲ್ಲಾ ಕಾರ್ಯದರ್ಶಿ, ಆರೆಂಜ್ ಕೌಂಟಿ ಸಂಸ್ಥೆ ಮತ್ತು ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜದ ಸದಸ್ಯರ ಸಹಕಾರದಿಂದ ಸುಮಾರು 2.25 ಲಕ್ಷದ ಕಾರ್ಬನ್ ಫೈಬರ್ ಪಾದ, ಸಿಲಿಕಾನ್ ಲೀನಿಯರ್ ಮತ್ತು ಸಾಕೆಟ್‌ನೊಂದಿಗೆ ಹೈಟೆಕ್ ಪ್ರಾಸ್ಟೆಸಿಸ್ ನ ಕೃತಕ ಕಾಲನ್ನು ಡಾ. ತ್ಯಾಗರಾಜ್ ಅಳವಡಿಸಿದರು. ಇದೇ ಸಂದರ್ಭದಲ್ಲಿ ಭಾರತ ಸರ್ಕಾರದ ರಾಷ್ಟೀಯ ಮಹಿಳಾ ಆಯೋಗದ ಸಲಹೆಗಾರ, ಸಂಪನ್ಮೂಲ ವ್ಯಕ್ತಿ ಪಿ.ಎಸ್. ಶರತ್ ರವರು ಧನೇಶ್ ರವರಿಗೆ ಲ್ಯಾಫ್ ಟಾಪ್ ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಇವಾಲ್ವ್ ಬ್ಯಾಂಕ್ ರೆಸಾರ್ಟ್ ನ ವಸಂತಕುಮಾರ್ , ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಟೀನಾ ಫರ್ನಾಂಡಿಸ್, ಜುಮ್ಮಾ ಮಸೀದಿಯ ಅಧ್ಯಕ್ಷ ಕೆ ಪಿ ರಶೀದ್ , ಸಹಾರ ಫ್ರೆಂಡ್ಸ್ ತಂಡದ ರಾವುಫ್ , ವಿರಾಜಪೇಟೆ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಲತಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮುತ್ತಪ್ಪ ಕಾರ್ಯಕ್ರಮದಲ್ಲಿ ಶ್ರೀಮುತ್ತಪ್ಪನ್ ಮಲೆಯಾಳಿ ಸಮಾಜದ ಸರ್ವ ಸದಸ್ಯರು , ಹಿಂದೂ ಮಲೆಯಾಳಿ ಮಹಿಳಾ ಅಶೋಸಿಯೇಷನ್ ನ ಸರ್ವ ಸದಸ್ಯರು ಸಂತ ಅನ್ನಮ ಪ್ರೌಢಶಾಲೆಯ ಶಿಕ್ಷಕ ವರ್ಗ , ವಿದ್ಯಾರ್ಥಿಗಳು ಹಾಜರಿದ್ದರು .

coorg buzz
coorg buzz