ತೆರಾಲು ಬಳಿ ಹುಲಿ ಸೆರೆಹಿಡಿಯುವ ಕಾರ್ಯಾಚರಣೆ: ಸ್ಥಳಕ್ಕೆ ಎ.ಎಸ್.ಪೊನ್ನಣ್ಣ ಭೇಟಿ

Tiger capture operation

Share this post :

ಕೊಡಗು ಜಿಲ್ಲೆಯ ಬಿರುನಾಣಿ ಗ್ರಾ.ಪಂ.ವ್ಯಾಪ್ತಿಯ ತೆರಾಲು ಗ್ರಾಮ ವ್ಯಾಪ್ತಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳಲಾಗಿರುವ ‘ಹುಲಿ (Tiger) ಹಿಡಿಯುವ ಕಾರ್ಯಾಚರಣೆ’ ಸ್ಥಳಕ್ಕೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು. ಹುಲಿ ಸೆರೆಹಿಡಿಯುವ ಕಾರ್ಯಚರಣೆ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸ್ಥಳೀಯರ ಜೊತೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸುದೀರ್ಘ ಚರ್ಚಿಸಿದರು.

ತೆರಾಲು, ಟಿ.ಶೆಟ್ಟಿಗೇರಿ, ಶ್ರೀಮಂಗಲ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಹುಲಿಯು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಜನರು ಭಯದಿಂದ ಜೀವಿಸುವಂತಾಗಿದೆ. ಆದ್ದರಿಂದ ಹುಲಿಯನ್ನು ಸೆರೆ ಹಿಡಿಯುವಂತಾಗಬೇಕು ಎಂದು ಸ್ಥಳೀಯರು ಕೋರಿದರು. ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರು ಅರಣ್ಯ ಅಧಿಕಾರಿಗಳು, ಗ್ರಾ.ಪಂ.ಪಿಡಿಒ ಹಾಗೂ ಸ್ಥಳೀಯರು ಒಳಗೊಂಡ ವಾಟ್ಸ್‍ಆಫ್ ಗುಂಪು ಮಾಡಿ, ತಕ್ಷಣವೇ ಮಾಹಿತಿ ನೀಡಿದ್ದಲ್ಲಿ ಹುಲಿಯನ್ನು ಸೆರೆ ಹಿಡಿಯಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಸ್ಥಳೀಯರು ಸಹಕರಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರು ಇರ್ಪುವಿನಿಂದ ಕೂಟಿಯಾಲವರೆಗೂ ಹುಲಿಯ ಚಲನವಲನದ ಬಗ್ಗೆ ನಿಗಾವಹಿಸಲಾಗುವುದು. ಈ ಸಂಬಂಧ ಕ್ಯಾಂಪ್‍ಗಳನ್ನು ಮಾಡಿ ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ತೆರಾಲು ಭಾಗವು ಬ್ರಹ್ಮಗಿರಿ ವನ್ಯಜೀವಿ ವ್ಯಾಪ್ತಿಯಲ್ಲಿ ಬರಲಿದ್ದು, ಕಾಡಂಚಿನಲ್ಲಿ ವಾಸಿಸುವ ಜನರಿಗೆ ಸುರಕ್ಷತೆ ಒದಗಿಸುವುದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು.

ಬಡವರು, ಆದಿವಾಸಿಗಳು ಸಹ ವಾಸಿಸಬೇಕು. ಆ ನಿಟ್ಟಿನಲ್ಲಿ ಭೂಮಿ ಒದಗಿಸಬೇಕು. ಆದಿವಾಸಿಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಭರವಸೆ ನೀಡಲಾಗಿದೆ. ಅದರಂತೆ ನಡೆದುಕೊಳ್ಳಬೇಕು. ಮಾನವೀಯತೆಯಿಂದ ನೋಡಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ಅರಣ್ಯ ಅಂಚಿನಲ್ಲಿಯೂ ಸಹ ಸಾಕಷ್ಟು ಭೂಮಿ ಒತ್ತುವರಿಯಾಗಿದೆ. ಆ ನಿಟ್ಟಿನಲ್ಲಿ ಆದಿವಾಸಿಗಳು, ಬಡವರಿಗೆ ಸಹ ವಾಸಕ್ಕೆ ಜಾಗ ಒದಗಿಸಬೇಕಿದೆ ಎಂದು ಶಾಸಕರು ಸಲಹೆ ಮಾಡಿದರು.

ಹುಲಿ ಸೆರೆಹಿಡಿಯುವ ಕಾರ್ಯಾಚರಣೆಗೆ ದುಬಾರೆ ಸಾಕಾನೆ ಶಿಬಿರದಿಂದ ಗೋಪಿ ಮತ್ತು ಶ್ರೀರಾಮ ಎರಡು ಸಾಕಾನೆಗಳನ್ನು ಬಳಸಿಕೊಳ್ಳಲಾಗಿದೆ. ಈ ಸಂಬಂಧ ಐದು ದಿನಗಳಿಂದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು. ಹುಲಿ ಸೆರೆ ಹಿಡಿಯುವ ಸಂಬಂಧ ಅರಣ್ಯ ಸಚಿವರ ಜೊತೆ ಚರ್ಚಿಸಲಾಗಿದ್ದು, ಎರಡು ಹುಲಿಯನ್ನು ಸೆರೆ ಹಿಡಿಯಲು ಅನುಮತಿ ದೊರೆತಿದೆ. ಆ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭವಾಗಿದೆ ಎಂದು ಶಾಸಕರು ಹೇಳಿದರು.

ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅರಣ್ಯ ಸಿಬ್ಬಂದಿಗಳ ಜೊತೆ ಚರ್ಚಿಸಿದ ಎ.ಎಸ್.ಪೊನ್ನಣ್ಣ ಅವರು ಅರಣ್ಯ ಇಲಾಖೆ ಸಿಬ್ಬಂದಿಗಳು ಪೊಲೀಸರು ಹಾಗೂ ಸೈನಿಕರಂತೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವುದು ಶ್ಲಾಘನೀಯ. ತಮ್ಮ ರಕ್ಷಣೆ ಜೊತೆಗೆ ಕಾಡಂಚಿನ ಜನರ ರಕ್ಷಣೆಯೂ ಅತ್ಯಗತ್ಯ. ಆ ನಿಟ್ಟಿನಲ್ಲಿ ಕಾಡಂಚಿನ ಜನರ ಆತಂಕವನ್ನು ದೂರ ಮಾಡಿ ಹುಲಿಯನ್ನು ಸೆರೆ ಹಿಡಿಯುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಸಲಹೆ ಮಾಡಿದರು.

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಹಿಂದಿನಿಂದಲೂ ವನ್ಯಜೀವಿ ಹಾಗೂ ಮಾನವ ಸಂಘರ್ಷ ಇದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಶಾಸಕರು ಪ್ರಯತ್ನಿಸಿದ್ದಾರೆ. ಆ ನಿಟ್ಟಿನಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರು ಮಾತನಾಡಿ ಮಾಕುಟ್ಟ-ಶ್ರೀಮಂಗಲ ವನ್ಯಜೀವಿ ವಿಭಾಗ, ತಿತಿಮತಿ ಆರ್‍ಆರ್‍ಟಿ ವಿಭಾಗ ಹಾಗೂ ಇಟಿಎಪ್ ವಿಭಾಗ ಸೇರಿದಂತೆ ಒಟ್ಟು 60 ಸಿಬ್ಬಂದಿಗಳು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಬಿರುನಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್ ಅವರು ಮಾತನಾಡಿ ಬಿರುನಾಣಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಭಯದ ವಾತಾವರಣದಲ್ಲಿ ವಾಸಿಸುವಂತಾಗಿದೆ. ಹುಲಿ ಹಾಗೂ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಈ ಸಂಬಂಧ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದರು. ವಲಯ ಅರಣ್ಯಾಧಿಕಾರಿ ಸಂತೋಷ್ ಹೂಗಾರ್, ಶಂಕರ್, ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪ್ರಶಾಂತ್, ನವೀನ್, ಪ್ರೀತಮ್, ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇತರರು ಇದ್ದರು.