ಮೈಸೂರು: ಮೈಸೂರು ಕಲ್ಚರಲ್ ಅಸೋಸಿಯೇಷನ್, ವಿಸ್ಮಯ ಪ್ರಕಾಶನ ಹಾಗೂ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವತಿಯಿಂದ ಸಂಗೀತ ವಿವಿ ಸಭಾಂಗಣದಲ್ಲಿ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರ ಮೂರು ಕೃತಿಗಳು ಲೋಕಾರ್ಪಣೆಗೊಂಡವು.
‘ಮೈಸೂರು ವೃತ್ತಗಳ ವೃತ್ತಾಂತ’ ಕೃತಿಯನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಸಂದೇಶ್ ಕುಮಾರ್, ‘ಸಿಂಧೂರ’ ಕೃತಿಯನ್ನು ಲೆಫ್ಟಿನೆಂಟ್ ಕರ್ನಲ್ ಪಿ.ಎಸ್. ಗಣಪತಿ, ‘ಮೈಸೂರಿನ ಗಲ್ಲಿ ಕಥೆ’ ಕೃತಿಯನ್ನು ಶಾಸಕ ಟಿ.ಎಸ್. ಶ್ರೀವತ್ಸ ಬಿಡುಗಡೆಗೊಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೂರು ಕೃತಿಗಳ ವಿಷಯ ಆಯ್ಕೆ ವಿಭಿನ್ನವಾಗಿದೆ. ಗಲ್ಲಿ, ರಸ್ತೆಗಳ ಮಹತ್ವದ ಕುರಿತು ಬರೆಯುವುದು ಉತ್ತಮ ಪ್ರಯೋಗವಾಗಿದೆ. ಸೇನಾನಿಯಾಗುವ ಆಕಾಂಕ್ಷೆ ಹೊಂದಿದ್ದ ರಮೇಶ್ ಉತ್ತಪ್ಪ ಸಾಹಿತ್ಯ ರಚನೆ ಕೆಲಸ ಮಾಡಿದ್ದಾರೆ. ಇದರಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಗನ್ ಹಿಡಿಯಬೇಕಾದವರು ಪೆನ್ನು ಹಿಡಿದಿದ್ದಾರೆ ಎಂದರು.
ಸಿಂಧೂರ ಪುಸ್ತಕದಲ್ಲಿರುವ ವೀರ ಯೋಧರ ಯಶೋಗಾಥೆಗಳು ಯುವ ಜನತೆಗೆ ಪ್ರೇರಣೆಯಾಗಿವೆ. ಗ್ರಾಮ, ವೃತ್ತ, ರಸ್ತೆ, ಗಲ್ಲಿಗಳಿಗೆ ಒಂದೊಂದು ಇತಿಹಾಸವಿರುತ್ತದೆ. ಈ ವಿಶೇಷತೆಯನ್ನು ಗುರುತಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪುಸ್ತಕ ರಚನೆ ಮಹತ್ವದ್ದಾಗಿದೆ ಎಂದರು.
ಕರ್ನಾಟಕ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಸಂದೇಶ್ ಕುಮಾರ್ ಮಾತನಾಡಿ, ಯುವಜನರು ಓದಿನಿಂದ ವಿಮುಖರಾಗುತ್ತಿರುವ ಈ ಹೊತ್ತಿನಲ್ಲಿ ಈ ಪುಸ್ತಕ ರಚನೆ ಔಚಿತ್ಯಪೂರ್ಣವಾಗಿದೆ. ಹಾಗಾಗಿ ಎಲ್ಲರೂ ಈ ಪುಸ್ತಕ ಹೃದಯಕ್ಕೆ ತೆಗೆದುಕೊಳ್ಳಬೇಕು. ಅಲ್ಲದೇ ಮುಂದಿನ ಪೀಳಿಗೆಗೆ ಇದನ್ನು ಕಾಪಿಡಬೇಕು ಎಂದರು.
ಲೆಫ್ಟಿನೆಂಟ್ ಕರ್ನಲ್ ಪಿ.ಎಸ್. ಗಣಪತಿ ಮಾತನಾಡಿ, ಈ ಕೃತಿ ಇಂದಿನವರಿಗೆ ಮಾತ್ರವಲ್ಲದೇ ಭವಿಷ್ಯದ ಪೀಳಿಗೆಗೂ ಮಾದರಿಯಾಗಿದೆ. ಮೊಬೈಲ್, ವಾಟ್ಸಾಪ್ ಸೆಳತವಿರುವ ಕಾಲಘಟ್ಟದಲ್ಲಿ ಯುವಜನರನ್ನು ಸಾಹಿತ್ಯದತ್ತ ಸೆಳೆಯುವ ಸಾಹಿತ್ಯ ರಚನೆ ಇದಾಗಿದೆ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಮೈಸೂರಿನ ವೃತ್ತ, ಗಲ್ಲಿಗಳ ಬಗ್ಗೆ ಬರೆದಿರುವುದು ನಮ್ಮ ನಾಡಿನ ಸಂಸ್ಕೃತಿ, ಆಚಾರ-ವಿಚಾರ, ಇತಿಹಾಸ ಉಳಿಸುವ ಕೆಲಸವಾಗಿದೆ ಎಂದರು.
ಸಂಗೀತ ವಿವಿ ಕುಲಪತಿ ನಾಗೇಶ್ ವಿ. ಬೆಟ್ಟಕೋಟೆ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ, ಸಂಗೀತ ವಿವಿ ಕುಲಸಚಿವ ಡಾ. ಮಂಜುನಾಥ್, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ. ಪಿ. ನಾಗೇಶ್, ವಿಸ್ಮಯ ಬುಕ್‌ಹೌಸ್‌ನ ಪ್ರಕಾಶ್ ಚಿಕ್ಕಪಾಳ್ಯ ಇದ್ದರು.
ನಗರದ ಸಂಗೀತ ವಿಶ್ವ ವಿದ್ಯಾಲಯದಲ್ಲಿ ಶುಕ್ರವಾರ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚನೆಯ ಮೂರು ಕೃತಿಗಳು ಲೋಕಾರ್ಪಣೆಗೊಂಡವು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಟಿ.ಎಸ್. ಶ್ರೀವತ್ಸ, ನಾಗೇಶ್ ವಿ. ಬೆಟ್ಟಕೋಟೆ, ಸಂದೇಶ್ ಕುಮಾರ್, ಪಿ.ಎಸ್. ಗಣಪತಿ ಹಾಗೂ ಇತರರು ಇದ್ದರು.