ನಮ್ಮಮನೆಯಲ್ಲಿ ಹಿರಿಯರು, ಆಗಾಗ್ಗೆ ಹೀಗೆ ಮಾಡಬೇಡ, ಈಗ ಬೇಡ ನಾಳೆ ಮಾಡು, ಇಲ್ಲಿ ಬೇಡ ಎಂದೆಲ್ಲ ಕೆಲವೊಮ್ಮೆ ಉಪದೇಶ ನೀಡುತ್ತಾರೆ. ಅವುಗಳನ್ನೆಲ್ಲ ನಾವು ಮೂಢನಂಬಿಕೆ ಎಂದು ಹೇಳಿಕೊಂಡು ಬಂದಿದ್ದೇವೆ. ಹಿಂದಿನಿಂದಲೂ ಬಂದ ಕೆಲವು ಆಚರಣೆಗಳು, ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಕಾರಣಗಳು ಅಡಗಿರುತ್ತವೆ. ಆದರೆ, ನಮಗೆ ಕಾರಣಗಳನ್ನು ತಿಳಿಸುವುದರಲ್ಲಿ ನಮ್ಮಹಿರಿಯರು ವಿಫಲರಾಗಿದ್ದಾರೆ. ನಮ್ಮಹಿರಿಯರು ಕಾರಣಗಳನ್ನು ತಿಳಿದೋ , ತಿಳಿಯದೆಯೋ ಅದನ್ನಪಾಲಿಸುತ್ತಲೇ ಬಂದಿದ್ದರಿಂದ, ಅದನ್ನು ನಮಗೂ ಹೇಳುತ್ತಾ ಬಂದಿದ್ದಾರೆ. ಅಂತಹ ಕೆಲವು ನಂಬಿಕೆಗಳು ಹಾಗೂ ಅದರ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಬಿಚ್ಚಿಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಬೆಳ್ಳಿ ಮೂಗುತಿ ಧರಿಸುವುದರ ಲಾಭವೇನು ಗೊತ್ತಾ!
ಬೆಳ್ಳಿ ಮೂಗುತಿಯು ದೇಹವನ್ನು ತಂಪಾಗಿರಿಸಲು ಸಹಾಯಕವಾಗಿದೆ, ಅಲ್ಲದೆ ಪಾಸಿಟಿವ್ ಎನರ್ಜಿ ಬರುತ್ತದೆ. ಇದು ವಿವಾಹ ಸಂಬಂಧಿಸಿದ ಅಡೆತಡೆಗಳನ್ನು ದೂರಮಾಡುತ್ತದೆ ಮತ್ತು ವಿವಾಹ ಜೀ ವನ ಸುಖಮಯವಾಗಿರುತ್ತದೆ ಹಾಗೂ ಒಳ್ಳೆಯ ಪರಿಣಾಮ ಬೀರುತ್ತದೆ.
ಸಂಜೆ ಮೇಲೆ ಉಗುರು ತೆಗೆಯಬಾರದು!
ಹಿಂದಿನ ದಿನಗಳಲ್ಲಿ ಮನೆಗಳಲ್ಲಿ ವಿದ್ಯುತ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಸಂಜೆ ಮೇಲೆ ಉಗುರು ತೆಗೆದರೆ ರಾತ್ರಿ ಊಟದ ಪಾತ್ರೆಯ ಒಳಗೆ ಉಗುರು ಬೀಳಬಹುದೆಂಬ ಕಾರಣಕ್ಕೆ ಮತ್ತು ಕತ್ತಲಲ್ಲಿ ಉಗುರು ಕತ್ತರಿಸುವಾಗ ಕೈಬೆರಳಿಗೆ ಗಾಯವಾಗಬಹುದೆಂದು ರಾತ್ರಿಯ ಸಮಯ ಉಗುರು ತೆಗೆಯಬಾರದೆಂದು ಹೇಳುತ್ತಾರೆ. ಆದರೆ ಸರಿಯಾದ ಕಾರಣ ತಿಳಿಯದವರು, ರಾತ್ರಿ ಉಗುರು ತೆಗೆಯುವುದು ಅಪಶಕುನವೆಂದು ಹೇಳುವುದುಂಟು.
ನಮ್ಮದಾರಿಗೆ ಬೆಕ್ಕು ಅಡ್ಡಬಂದರೆ ಅಪಶಕುನಾನ!
ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಎತ್ತಿನ ಗಾಡಿ ಮತ್ತು ಕುದುರೆ ಬಳಸಿ ಊರಿಂದಊರಿಗೆ ಜನರು ಓಡಾಡ್ತಾ ಇದ್ದರು. ಆಗ ದಾರಿದೀಪದ ವ್ಯವಸ್ಥೆಯೂ ಇರಲಿಲ್ಲ. ಆ ಸಮಯದಲ್ಲಿ ಯಾವುದೇ ಪ್ರಾಣಿ ದಾರಿಗೆ ಅಡ್ಡಲಾಗಿ ಬಂದರೆ, ಬೆಕ್ಕು ,ಹುಲಿ, ಕರಡಿ, ಚಿರತೆ ಇತ್ಯಾದಿ, ಕತ್ತಲಲ್ಲಿ ಅವುಗಳ ಕಣ್ಣುಗಳು ಬಹಳ ವಿಚಿತ್ರವಾಗಿ ಹೊಳೆಯುತ್ತಾ ಇತ್ತು. ಕತ್ತಲಲ್ಲಿ ಅದು ಭಯಾನಕವಾಗಿ ಕಾಣ್ತಾ ಇತ್ತು. ಪ್ರಾಣಿಗಳ ಮೈಬಣ್ಣಕಪ್ಪಗಾಗಿದ್ದರೆ, ಆಗ ಬರೇ ಕಣ್ಣುಗಳೇ ಕಾಣ್ತಿದ್ದರಿಂದ ಎತ್ತು, ಕುದುರೆಗಳೂ ಗಾಬರಿಯಾಗ್ತಾ ಇದ್ದವು. ಆಗ, ಪ್ರಾಣಿಯು ಹೋಗುವ ತನಕ ಅಲ್ಲೇ ನಿಂತು ಬಳಿಕ ಮುಂದೆ ಸಾಗುತ್ತಿದ್ದರು. ಕಾಲಕ್ರಮೇಣ, ಕಾಡು ಪ್ರಾಣಿಗಳಿಗಿಂತ ಬೆಕ್ಕುಗಳೇ ಹೆಚ್ಚು ಅಡ್ಡಬರುತ್ತಿದ್ದರಿಂದ, ಈ ನಂಬಿಕೆ ಹುಟ್ಟಿಕೊಂಡಿದೆ.
ಆಷಾಢ ಮಾಸದಲ್ಲಿ ನವದಂಪತಿಗಳು ದೂರವಾಗಿರುವುದಕ್ಕೆ?
ಆಷಾಢ ಮಾಸದಲ್ಲಿ ಗರ್ಭಧಾರಣೆಯಾದರೆ, ಮಗು ಬೇಸಿಗೆಯಲ್ಲಿ ಜನಿಸುತ್ತದೆ. ಆ ಸಮಯದಲ್ಲಿ ಉಷ್ಣಾಂಶವೂ ಹೆಚ್ಚಿರುವುದರಿಂದ ನವಜಾತ ಶಿಶುವಿಗೆ ಖಾಯಿಲೆಗಳು ಬರಬಹುದು. ಹೀಗಾಗಿ ಆಷಾಢದಲ್ಲಿ ದಂಪತಿಗಳು ದೂರವಿರಬೇಕೆಂದು ಹೇಳುತ್ತಾರೆ.
ಸಂಜೆಯ ಸಮಯ ಮನೆಗೂಡಿಸಿದರೆ ದರಿದ್ರವಂತೆ!
ಸೂರ್ಯ ಮುಳುಗಿದ ನಂತರ (ಕತ್ತಲಾದ ಮೇ ಲೆ) ಕಸ ಗುಡಿಸಿದರೆ ಲಕ್ಷ್ಮೀದೇವಿ ಮನೆಯಿಂದ ಹೊರ ಹೋಗುತ್ತಾಳೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ನೀವೂ ಕೇಳಿರಬಹುದು. ಆದರೆ ಇದರ ಹಿಂದೆ ಬೇರೆಯೇ ಕಾರಣವಿದೆ. ಹಿಂದಿನ ದಿನಗಳಲ್ಲಿ ಚಿಕ್ಕದೀಪ, ಮೊಂಬತ್ತಿಯೇ ರಾತ್ರಿ ಸಮಯದಲ್ಲಿ ಬೆಳಕು ನೀ ಡುತ್ತಿತ್ತು. ಆ ಬೆಳಕಿನಲ್ಲಿ ಕಸ ಗುಡಿಸಿ, ಕಸವನ್ನು ಹೊರಗೆ ಬಿಸಾಡಿದರೆ, ನಮ್ಮ ಕಣ್ತಪ್ಪಿನಿಂದ ಏನಾದರೂ ಬೆಲೆಬಾಳುವ ವಸ್ತುಗಳನ್ನೂ ನಾವು ಬಿಸಾಡುವ ಸಾಧ್ಯತೆ ಇರುತ್ತದೆ. ಹೀಗಾಗದಿರಲಿ ಎಂಬ ಎಚ್ಚರಿಕೆಗಾಗಿ, ರಾತ್ರಿ ಸಮಯ ಕಸಗುಡಿಸಬಾರದೆಂದು ಹೇಳುತ್ತಾರೆ.
✍️ ಅಕ್ಷಿತ ಆಚಾರ್ಯ