ಗುಂಡಿಮಯ ರಸ್ತೆಗೆ ಜಲ್ಲಿ, ಮಣ್ಣು ಹಾಕಿ ತಾತ್ಕಾಲಿಕ ಪರಿಹಾರ ಕಂಡುಕೊಂಡ ಯುವಕರು – ಸುರಿವ ಮಳೆಯನ್ನೂ ಲೆಕ್ಕಿಸದೆ ಆಡಳಿತ ವ್ಯವಸ್ಥೆಗೆ ಚಾಟಿ ಬೀಸಿದ ಗ್ರಾಮಸ್ಥರು..!

Share this post :

coorg buzz

ಮಡಿಕೇರಿ : ಹಲವು ವರ್ಷಗಳಿಂದ ಡಾಂಬರು ಕಾಣದೆ ಗುಂಡಿಬಿದ್ದು ಶೋಚನೀಯ ಸ್ಥಿತಿಯಲ್ಲಿದ್ದ ರಸ್ತೆಗೆ ರಾತ್ರೋರಾತ್ರಿ ಯುವಕರ ತಂಡ ಕಲ್ಲು, ಮಣ್ಣು ಹಾಕಿ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಂಡಿರುವ ಬೆಳವಣಿಗೆ ಮರಗೋಡು ಗ್ರಾಮದಲ್ಲಿ ನಡೆದಿದೆ.
ಮರಗೋಡುವಿನಿಂದ ಕಟ್ಟೆಮಾಡುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿತ್ತು. ರಸ್ತೆಗೆ ಡಾಂಬರೀಕರಣ ಮಾಡುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈಗ ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಾಗುವವರಿಗೆ ಇನ್ನಿಲ್ಲದ ಸಮಸ್ಯೆಯಾಗುತ್ತಿತ್ತು.
ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನ ಅರಿತ ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಸದಸ್ಯರು ಹಾಗೂ ಸ್ಥಳೀಯರು ತಾವೇ ಕೈಯ್ಯಲ್ಲಾದಷ್ಟು ಹಣ ಸಂಗ್ರಹಿಸಿ ಕಲ್ಲು, ಜಲ್ಲಿ, ಮಣ್ಣು ತಂದು ಗುಂಡಿಗಳಿಗೆ ಹಾಕಿ ಮುಚ್ಚಿದ್ದಾರೆ. ನಿರಂತರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಗ್ರಾಮದ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಹೊಂಡ, ಗುಂಡಿಗಳನ್ನು ಮುಚ್ಚುವಲ್ಲಿ ಯುವಕರು ಶ್ರಮಿಸಿದ್ದಾರೆ. ಇದರೊಂದಿಗೆ ರಸ್ತೆಯಲ್ಲಿ ಹರಿದೊ ಹೋಗುತ್ತಿದ್ದ ಮಳೆ ನೀರು ಚರಂಡಿಗೆ ಹರಿಯುವಂತೆ ಮಾಡಿದ್ದಾರೆ.
ಊರಿನ ಸಮಸ್ಯೆಗಳನ್ನು ಪರಿಹರಿಸಬೇಕಾಗಿದ್ದ ಆಡಳಿತ ವ್ಯವಸ್ಥೆ ಗಾಢ ನಿದ್ದೆಗೆ ಜಾರಿವೆ. ಹಾಗಾಗಿ ತಾವೇ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದೇವೆಂದು ಯುವಕರು ಹೇಳಿದರು. ಆಮೂಲಕ ಆಡಳಿತ ವ್ಯವಸ್ಥೆಗೆ ಚಾಟಿ ಬೀಸಿದ್ದಾರೆ. ಗ್ರಾಮದ ಯುವಕರ ಶ್ರಮದಾನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ಆಡಳಿತ ವ್ಯವಸ್ಥೆ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.