ಕುಶಾಲನಗರ : ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಈ ಜಗತ್ತಿಗೆ ಸಾರಿದ ಜೀವನ ಮೌಲ್ಯಗಳು ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳು ಮತ್ತು ವಿಶ್ವ ಮೌಲಿಕವಾದ ಸಂದೇಶಗಳು ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಅಭಿಪ್ರಾಯಪಟ್ಟರು.
ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಪುಣ್ಣಿಮೆ ಪೂಜಾ ಕಾರ್ಯಕ್ರಮದ ಅಂಗವಾಗಿ ಜರುಗಿದ ʼವಚನಗಳಲ್ಲಿ ಜೀವನ ಮೌಲ್ಯʼ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಾಮಾನ್ಯ ಜನರ ಜೀವನ ವಿಧಾನವನ್ನು ಪ್ರಧಾನವಾಗಿರಿಸಿಕೊಂಡು ಜನತೆಗೆ ಹತ್ತಿರವಾಗಿ ಅವರ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಸ್ಪಂದಿಸುವ ಜೀವಗುಣದೊಂದಿಗೆ ಅಂತರಂಗದ ಆತ್ಮಸಾಕ್ಷಿಯಾಗಿ ಜನಪರವಾದ ಮತ್ತು ಲೋಕಕಲ್ಯಾಣಕರವಾದ ಚಿಂತನೆಗಳು ಬಸವಾದಿ ಶರಣರ ವಚನಗಳ ಮೂಲಕ ಹೊರಹೊಮ್ಮಿ ಬಂದಿವೆ. ಕಾಯಕ ಮಹತ್ವ, ತ್ರಿವಿಧ ದಾಸೋಹ ಪರಿಕಲ್ಪನೆ, ಸಾಮಾಜಿಕ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯ ಹಾಗೂ ವೈಯುಕ್ತಿಕ ಸ್ವಾತಂತ್ರ್ಯದಲ್ಲಿ ಸ್ತ್ರೀ ಸಮಾನತೆ, ದಯೆ ಮತ್ತು ಧರ್ಮದ ಪರಿಕಲ್ಪನೆ, ಅಸ್ಪೃಶ್ಯತೆ, ಅನುಭಾವ, ಕಲ್ಯಾಣ ಸಮಾಜದ ನಿರ್ಮಾಣ ಮೊದಲಾದ ವೈಶಿಷ್ಟ್ಯಪೂರ್ಣ ಜೀವನ ಮೌಲ್ಯ ಪರಿಕಲ್ಪನೆಗಳನ್ನು ಇಡೀ ಮನುಕುಲಕ್ಕೆ ಸಾರಿದ ಗರಿಮೆ ಈ ನಾಡಿನ ಶರಣರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರಕಲಗೂಡು ಚಿಲುಮೆ ಮಠದ ಸ್ವಾಮೀಜಿಗಳಾದ ಶ್ರೀ ಜಯದೇವ ಸ್ವಾಮಿಗಳು ಆಶೀರ್ವಚನ ನೀಡಿದರು. ಇಂದಿನ ತಲೆಮಾರಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿಕೊಡುವ ನಿಟ್ಟಿನಲ್ಲಿ ಇಂತಹ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನಡೆಯಬೇಕು. ದೇಹದ ಪರಿಕಲ್ಪನೆ ಮತ್ತು ಧರ್ಮದ ಪರಿಕಲ್ಪನೆಯನ್ನು ಪ್ರತಿಯೊಬ್ಬರಿಗೂ ಅರಿವಿಗೆ ಬರುವ ಮೂಲಕ ಆಚರಣೆಗೆ ತರಬೇಕೆಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ತೊರೆನೂರು ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀ ಮಲ್ಲೇಶ ಸ್ವಾಮೀಜಿ ವಹಿಸಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಕೊಡಗು ಘಟಕದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಮುಖಂಡರಾದ ಕೃಷ್ಣೇಗೌಡ, ಸಾಂಬಶಿವಮೂರ್ತಿ, ಉದಯ್ ಕುಮಾರ್, ವಿವಿಧ ಮುಖಂಡರುಗಳು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಠದ ಭಕ್ತ ಮಂಡಳಿ ಹಾಗೂ ಅಕ್ಕನ ಬಳಗದವರು ಉಪಸ್ಥಿತರಿದ್ದರು.
