ಕುಶಾಲನಗರ : ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧವು ಸಂವೇದನಾಶೀಲವಾದುದು, ಮನುಷ್ಯನಿಗಿರುವಷ್ಟೇ ಸ್ವಾತಂತ್ರ್ಯ ಮತ್ತು ಸಮಾನ ಹಕ್ಕುಗಳು ಈ ಭೂಮಿಯಲ್ಲಿ ಜೀವಿಸುತ್ತಿರುವ ಪ್ರಾಣಿ ಸಂಕುಲಕ್ಕೂ ಇದೆ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಿಸಿದರು.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇಲ್ಲಿನ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ. ಕೊಡಗು ಹಾಗೂ ಕೊಡಗು ವಿಶ್ವವಿದ್ಯಾಲಯ, ಕೊಡಗು ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಪ್ರಾಣಿ-ಜನ್ಯರೋಗಗಳ” ದಿನದ ಅಂಗವಾಗಿ “ವನ್ಯಜೀವಿ: ಪ್ರಾಣಿಜನ್ಯರೋಗಗಳು” ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹರಡುವ ಪ್ರಾಣಿಜನ್ಯ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ಜುಲೈ ೦೬ ರಂದು ಪ್ರಾಣಿಜನ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಪಶುವೈದ್ಯಕೀಯ ವೃತ್ತಿಯು ಪ್ರಾಣಿಗಳ ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಮೀಸಲಾಗಿರುವ ಒಂದು ಉದಾತ್ತ ಮತ್ತು ಅತ್ಯಗತ್ಯ ಕ್ಷೇತ್ರವಾಗಿದೆ. ಪಶು ವೈದ್ಯರು ಅನಾರೋಗ್ಯ ಪೀಡಿತ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೇ ವನ್ಯ ಜೀವಿಗಳಿಂದ ಮನುಷ್ಯನಿಗೆ ಹರಡಬಹುದಾದ ಜನ್ಯರೋಗಗಳನ್ನು ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮತೋಲನ ಮತ್ತು ಸಾಮರಸ್ಯದ ಭವಿಷ್ಯಕ್ಕಾಗಿ ಪ್ರಾಣಿಗಳೊಂದಿಗೆ ಸಹಾನುಭೂತಿಯ ಸಂಬಂಧವನ್ನು ಮನುಷ್ಯ ಕಾಪಾಡಿಕೊಳ್ಳಬೇಕು. ಮನುಷ್ಯ ತನ್ನ ಸುತ್ತಣ ಪರಿಸರದಲ್ಲಿರುವ ವನ್ಯ ಜೀವಿಗಳ ಆರೈಕೆ ಮತ್ತು ರಕ್ಷಣೆ, ಅವುಗಳ ಸಂರಕ್ಷಣೆಯ ಜವಾಬ್ದಾರಿ ಹೊಂದಿರುತ್ತಾರೆ ಎಂದು ತಿಳಿಸಿದರು.
ಕೊಡಗಿನ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಂ.ಸಿ. ಶಿವಕುಮಾರ್, ಏಕ ಆರೋಗ್ಯ ಎನ್ನುವುದು ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರ ಆರೋಗ್ಯದ ಪರಸ್ಪರ ಸಂಬಂಧವನ್ನು ಗುರುತಿಸುವ ಸಹಯೋಗಿ ಮತ್ತು ಸಂಯೋಜಿತ ಪರಿಕಲ್ಪನೆಯಾಗಿದೆ. ಜನರ ಯೋಗ ಕ್ಷೇಮವು ಪ್ರಾಣಿಗಳ ಆರೋಗ್ಯ ಮತ್ತು ಅವುಗಳು ಹಂಚಿಕೊಳ್ಳುವ ಪರಿಸರ ವ್ಯವಸ್ಥೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎಂದರು.
ಕೊಡಗು ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಡಾ. ಸುರೇಶ.ಎಂ, ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ನಾಗಪ್ಪ, ಸಹ ಪ್ರಾಧ್ಯಾಪಕ ಡಾ. ಪ್ರಲ್ಲಾದ್ ಡಾ. ಗಿರೀಶ್ ಬಿ.ಸಿ. ವಿಷಯ ಮಂಡಿಸಿದರು. ಕಾರ್ಯಗಾರದಲ್ಲಿ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿನ ವಿವಿಧ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಕೊಡಗಿನ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.
ವಿದ್ಯಾರ್ಥಿನಿ ಶ್ರಮಿತಾ ಐಮುಡಿಯಂಡ ನಿರೂಪಿಸಿದರು. ಉಪನ್ಯಾಸಕ ಡಾ. ಜ಼ಮೀರ್ ಅಹಮದ್ ಸ್ವಾಗತಿಸಿದರು, ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಿಬ್ಬಂದಿ ಎನ್.ಟಿ. ಪ್ರಶಾಂತ್ ವಂದಿಸಿದರು.