ಯುವ ಒಕ್ಕೂಟ ವತಿಯಿಂದ ಭಾಗಮಂಡಲದಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆ.23ಕ್ಕೆ

Share this post :

ಮಡಿಕೇರಿ : ಕೊಡಗು ಜಿಲ್ಲಾ ಯುವ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆ.23 ರಂದು ಭಾಗಮಂಡಲದಲ್ಲಿ 33ನೇ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಮತ್ತು ಅಯ್ಯಂಗೇರಿ ಶ್ರೀ ಕೃಷ್ಣ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಭಾಗಮಂಡಲ ಗ್ರಾಮದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಕ್ರೀಡಾಕೂಟ ಆರಂಭಗೊಳ್ಳಲಿವೆ. ಸಾರ್ವಜನಿಕ ಪುರುಷರು ಹಾಗೂ ಮಹಿಳೆಯರ (7 ಮಂದಿಯ ತಂಡ) ವಿಭಾಗದಲ್ಲಿ ಹಗ್ಗಜಗ್ಗಾಟ, ಪುರುಷರಿಗೆ ವಾಲಿಬಾಲ್ (4 ಮಂದಿಯ ತಂಡ) ಮತ್ತು ಮಹಿಳೆಯರಿಗೆ ಥ್ರೋಬಾಲ್ (6 ಮಂದಿಯ ತಂಡ) ಪಂದ್ಯಾವಳಿ ನಡೆಯಲಿದೆ.
ಮಧ್ಯಾಹ್ನ 1 ಗಂಟೆಯಿಂದ ಕೆಸರು ಗದ್ದೆ ಓಟ ನಡೆಯಲಿದ್ದು, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರಿಗೆ, ಪ್ರೌಢಶಾಲಾ, ಪದವಿಪೂರ್ವ ಮತ್ತು ಪದವಿ ಕಾಲೇಜು ಯುವಕ, ಯುವತಿಯರಿಗೆ ಹಾಗೂ ಆಯೋಜಕರಿಗೆ ಓಟದ ಸ್ಪರ್ಧೆ, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಓಟದ ಸ್ಪರ್ಧೆ ನಡೆಯಲಿದೆ. ಸಂಜೆ ಸಾಂಪ್ರದಾಯಿಕ ಪೂಜೆಯ ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕ ಹಗ್ಗಜಗ್ಗಾಟಕ್ಕೆ ಸ್ಪರ್ಧಿಸುವ ಪುರುಷ ತಂಡಕ್ಕೆ ರೂ.1,500, ಮಹಿಳಾ ತಂಡಕ್ಕೆ ರೂ.1,000, ಸಾರ್ವಜನಿಕರ ವಾಲಿಬಾಲ್ ಹಾಗೂ ಥ್ರೋಬಾಲ್‌ಗೆ ತಲಾ ರೂ.1,000 ಪ್ರವೇಶ ಶುಲ್ಕ ಪಾವತಿಸಬೇಕು. ಆ.22 ರ ಸಂಜೆ 5 ಗಂಟೆಯ ಒಳಗೆ ತಂಡದ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಲಾಗುವುದು. ತಂಡಗಳ ನೋಂದಣಿಗಾಗಿ ಕಾವೇರಿಮನೆ ಭರತ್ 8431515404, ಬಿದ್ದಿಯಂಡ ಸುಭಾಷ್ 9845053501 ಅವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್ 9481213920, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ 8618568173 ಇವರನ್ನು ಸಂಪರ್ಕಿಸಬಹುದು.

coorg buzz
coorg buzz