ಬಾಲ ಗೋಕುಲ ವತಿಯಿಂದ ಸಂಭ್ರಮದಿಂದ ಜರುಗಿದ ಶ್ರೀಕೃಷ್ಣ ಜನ್ಮಾಷ್ಟಮಿ & ಛದ್ಮವೇಷ ಸಮಾಗಮ

Share this post :

ಮಡಿಕೇರಿ : ಕೇಶವ ಸ್ಮೃತಿ ಸಂವರ್ಧನ ಸಮಿತಿ ಮತ್ತು ಬಾಲ ಗೋಕುಲ ಮಡಿಕೇರಿ ವತಿಯಿಂದ ಮಡಿಕೇರಿಯ ಮಹದೇವಪೇಟೆಯಲ್ಲಿರುವ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ʼಶ್ರೀ ಕೃಷ್ಣ, ರುಕ್ಮಣಿ, ರಾಧೆ, ದೇವಕಿ, ಯಶೋಧೆ ಹಾಗೂ ವಸುದೇವರʼ ಛದ್ಮವೇಷ ಸಮಾಗಮ ಕಾರ್ಯಕ್ರಮ ನಡೆಯಿತು.
ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಬಾಲಗೋಕುಲ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖರಾದ ಉಮೇಶ್‌, ನೈತಿಕ ವೌಲ್ಯ ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ಅಧಃಪತನ ಉಂಟಾಗುತ್ತಿದ್ದು, ಮಾನವೀಯ ವೌಲ್ಯ ಬೆಳೆಸುವ ಸಾಂಸ್ಕೃತಿಕ ಶಿಕ್ಷಣ, ಇದನ್ನು ಬೋಧಿಸುವ ವ್ಯವಸ್ಥೆಯೇ ಬಾಲಗೋಕುಲಗಳಾಗಿವೆ ಎಂದರು. ಹೆಜ್ಜೆ ಹೆಜ್ಜೆಗೂ ದೈವಿಕ ಚೈತನ್ಯದಿಂದ ಜೀವನವನ್ನು ನಡೆಸುವವರು. ಹಿರಿಯರು ಕೊಟ್ಟಿರುವ ಉತ್ತಮ ಸಂಪ್ರದಾಯ, ಜೀವನ ಪದ್ಧತಿಗಳು ಸ್ವಂತಕ್ಕೆ ಅಲ್ಲ. ಬದಲು ಲೋಕದ ಸಮಸ್ತ ಚರಾಚರಕ್ಕೆ ಸಮರ್ಪಿತ ಎಂದು ಅರಿತು, ಸಶಕ್ತ ಸಮಾಜದ ಮೂಲಾಧಾರವು ಪ್ರೀತಿ ಮತ್ತು ಸೇವೆಯಾಗಿದೆ ಎಂದರು. ಇಂದಿನ ಮಕ್ಕಳು ಮುಂದಿನ ಸಮಾಜಕ್ಕೆ ಸತ್ಕಾರ್ಯಕ್ಕಾಗಿ ಸಿಗಬೇಕಾದರೆ ಬಾಲಗೋಕುಲ ಶಿಕ್ಷಣ ಅನಿವಾರ್ಯವಾಗಿದೆ. ನಮ್ಮ ಮಕ್ಕಳನ್ನು ವಿಶ್ವದ ಶ್ರೇಷ್ಠ ಕೊಡುಗೆಯಾಗಿ ರೂಪಿಸಲು ಬಾಲಗೋಕುಲ ಶಿಕ್ಷಣದಿಂದ ಪ್ರೇರಣೆ ಲಭಿಸಲಿ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಲಿಟಲ್ ಸ್ಟಾರ್ ಪ್ಲೇ ಸ್ಕೂಲ್ ಮುಖ್ಯಸ್ಥೆ ರಿಪಿಕಾ ಕಾವೇರಿ ಶ್ಯಾಮ್‌ ಅಪ್ಪಣ್ಣ, ಶ್ರೀ ಕೃಷ್ಣ ರಾಧೆ ಛದ್ಮವೇಷ ಸಮಾಗಮದಂತಹ ಕಾರ್ಯಕ್ರಮ ನಮ್ಮ ಭಾರತೀಯ ಸಂಸ್ಕೃತಿಯನ್ನು ಜಾಗೃತಾವಸ್ಥೆಯಲ್ಲಿ ಇಡಲು ಒಂದು ಉತ್ತಮವಾದ ಕಾರ್ಯವಾಗಿದೆ. ಚಾರಿತ್ರ್ಯಕ್ಕೆ ಮಹತ್ವ ಕೊಡುವ ದೇಶಭಕ್ತರನ್ನು ರೂಪಿಸುವ, ಆಧ್ಯಾತ್ಮಿಕ, ಸಾಂಸ್ಕೃತಿಕ ಆದರ್ಶವನ್ನು ಮೈಗೂಡಿಸುವ ಶಿಕ್ಷಣವಿಂದು ಭಾರತಕ್ಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬಾಲಗೋಕುಲದ ಪ್ರಯತ್ನ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳು ಛದ್ಮವೇಷ ಸಮಾಗಮದಲ್ಲಿ ಭಾಗವಹಿಸಿ ಸಂಭ್ರಮಪಟ್ಟರು. ಮಕ್ಕಳಿಗೆ ಪ್ರಸಂಶನ ಪತ್ರ, ಭಾರತ ಮಾತೆಯ ಭಾವಚಿತ್ರ ಹಾಗೂ ಉಡುಗೊರೆಯನ್ನು ನೀಡಿ ಅಭಿನಂದಿಸಲಾಯಿತು. ಸಾಮೂಹಿಕ ಭಕ್ತಿ ಗೀತೆ ಹಾಗೂ ಭಜನೆ ಗೀತಗಾಯನ ಕೂಡ ಏರ್ಪಡಿಸಲಾಗಿತ್ತು.

coorg buzz
coorg buzz